ತಿರುವನಂತಪುರಂ: ಮೊಬೈಲ್ ಬಳಸುವುದನ್ನು ತಾಯಿ ನಿಷೇಧಿಸಿದಕ್ಕೆ ಮನನೊಂದ 14 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಪಿ. ದೇವಿಕಾ (14) ಮೃತ ದುರ್ದೈವಿ. ಕರಮನ ನೆಡುಂಕಡುವಿನ ಪುಥೇನ್ವೀಡು ಮೂಲದ ದಿವಂಗತ ಪ್ರವೀಣ್ ಮತ್ತು ಗೋಪಿಕಾ ದಂಪತಿಯ ಪುತ್ರಿ.
ಒಂದು ವರ್ಷದ ಹಿಂದಷ್ಟೇ ದೇವಿಕಾ, ಅನಾರೋಗ್ಯ ಪೀಡಿತ ತಂದೆಯನ್ನು ಕಳೆದುಕೊಂಡಿದ್ದಳು. ಇದಾದ ಬಳಿಕ ತಂದೆಯ ಮೊಬೈಲ್ ಫೋನ್ ಅನ್ನು ಹೆಚ್ಚು ಬಳಸುತ್ತಿದ್ದಳು. ದೇವಿಕಾ ತಾಯಿ ಗೋಪಿಕಾ ಖಾಸಗಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಉದ್ಯೋಗಿಯಾಗಿದ್ದರು. ತಂದೆಯಿಲ್ಲದ ಮಗಳು ಎಂದು ತುಂಬಾ ಪ್ರೀತಿಯಿಂದ ಸಾಕುತ್ತಿದ್ದರು. ಆದರೆ, ದೇವಿಕಾ ಮೊಬೈಲ್ಗೆ ತುಂಬಾ ದಾಸಳಾಗಿದ್ದಳು. ಮೂರು ಹೊತ್ತು ಮೊಬೈಲ್ ಹಿಡಿದುಕೊಂಡೇ ಇರುತ್ತಿದ್ದಳು.
ಮಗಳ ನಡವಳಿಕೆಯನ್ನು ಗಮನಿಸಿದ ಗೋಪಿಕಾ, ಆಕೆಗೆ ಚೆನ್ನಾಗಿ ಬೈದು ಮೊಬೈಲ್ ಅನ್ನು ಅದೇ ದಿನ ಕಿತ್ತುಕೊಂಡಿದ್ದರು. ಮಧ್ಯಾಹ್ನ ಮೊಬೈಲ್ ಕಿತ್ತುಕೊಂಡ ತಾಯಿ ಇನ್ನೆಂದು ನಿನಗೆ ಮೊಬೈಲ್ ಕೊಡುವುದಿಲ್ಲ, ಹೋಗಿ ಓದಿಕೋ ಎಂದು ಗದರಿಸಿದ್ದರು. ಇದಾದ ಬಳಿಕ ದೇವಿಕಾ ಪಕ್ಕದಲ್ಲಿದ್ದ ಇದ್ದ ತನ್ನ ಸ್ನೇಹಿತೆಯ ಮನೆಗೆ ತೆರಳು ದುಃಖ ತೋಡಿಕೊಂಡಿದ್ದಳು. ಆದರೆ, ಆಕೆ ಇಂಥ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಯಾರೂ ಊಹೆ ಮಾಡಿರಲಿಲ್ಲ.
ಶನಿವಾರ ರಾತ್ರಿ 7.30ರ ಸುಮಾರಿಗೆ ಮನೆಯ ತನ್ನ ಕೋಣೆಯಲ್ಲಿ ದೇವಿಕಾ ಶವವಾಗಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಆದರೆ, ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು. ದೇವಿಕಾ ಓದುವುದರಲ್ಲೂ ಮುಂಚೂಣಿಯಲ್ಲಿದ್ದಳು. ಹಾಸ್ಟೆಲ್ನಲ್ಲಿ ಉಳಿದು ಓದುತ್ತಿದ್ದಳು. ಇದೀಗ ಸಣ್ಣ ಮಾತಿಗೆ ಸಾವಿನ ಹಾದಿ ಹಿಡಿದಿದ್ದು, ಮನೆಯಲ್ಲಿ ಶೋಕ ಸಾಗರ ಆವರಿಸಿದೆ.
ದೇವಿಕಾಳನ್ನು ಕಳೆದುಕೊಂಡ ತಾಯಿ ಗೋಪಿಕಾಗೆ ಇನ್ನೊಬ್ಬಳು ಮಗಳು ವೈಗಾ ಆಸರೆಯಾಗಿದ್ದಾಳೆ.