ಪಣಜಿ: ಗೋವಾದ 'ಫೆನ್ನಿ' ಉತ್ಪಾದನೆ ಮೇಲೆಯೂ ಹವಾಮಾನ ಬದಲಾವಣೆ ಪರಿಣಾಮ ಬೀರಿದೆ.
ಗೋವಾದಲ್ಲಿ ಗೋಡಂಬಿ ಬೆಳೆ ಭಾರಿ ಕುಸಿತವಾಗಿದ್ದು, ಫೆನ್ನಿ ಉತ್ಪಾದನೆಯಲ್ಲಿ ಶೇ 70-80ರಷ್ಟು ಕುಸಿತವಾಗಬಹುದು ಎಂದು ಉದ್ದಿಮೆದಾರರು ಅಂದಾಜಿಸಿದ್ದಾರೆ.
ಕಳೆದ ವರ್ಷ ಗೋವಾದಲ್ಲಿ 27,366 ಟನ್ ಗೋಡಂಬಿ ಬೆಳೆ ಲಭ್ಯವಾಗಿತ್ತು. ಈ ವರ್ಷ ಭಾರಿ ಕುಸಿತ ಕಂಡಿದೆ.
ಈ ವರ್ಷ ಫೆನ್ನಿ ಬೆಲೆ ಶೇ 30ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು 'ಗೋವಾ ಫೆನ್ನಿ ಭಟ್ಟಿ ಇಳಿಸುವವರ ಮತ್ತು ಬಾಟಲರ್ಸ್ ಸಂಘ'ದ ಸ್ಥಾಪಕ ಅಧ್ಯಕ್ಷ ಮ್ಯಾಕ್ ವಾಜ್ ತಿಳಿಸಿದ್ದಾರೆ.
'ಫೆನ್ನಿ ಉತ್ಪಾದನೆ ಕುಸಿಯುತ್ತಿರುವುದರಿಂದ ಭಟ್ಟಿ ಇಳಿಸುವವರು ಮತ್ತು ಬಾಟಲರ್ಸ್ ಬಗ್ಗೆ ಚಿಂತೆಯಾಗಿದೆ. ಫೆನ್ನಿ ಭಟ್ಟಿ ಇಳಿಸುವುದು ಅವರ ಜೀವನೋಪಾಯವಾಗಿದ್ದು, ಈ ವರ್ಷ ಅವರಿಗೆ ನಷ್ಟವಾಗಲಿದೆ. ಸರ್ಕಾರವು ಅವರ ನೆರವಿಗೆ ಧಾವಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
'ಫೆನ್ನಿ ಕೊರತೆಯಿಂದಾಗಿ ನಕಲಿ ಫೆನ್ನಿ ತಯಾರಿಕೆ ಭೀತಿಯೂ ಎದುರಾಗಿದೆ. ಇದರಿಂದಾಗಿ ನಿಜವಾದ ಫೆನ್ನಿ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಜನರು ಇಂಥ ಕೃತ್ಯ ಎಸಗದಂತೆ ಎಚ್ಚರಿಕೆ ವಹಿಸಬೇಕಿದೆ' ಎಂದು ಅವರು ಹೇಳಿದ್ದಾರೆ.