ನವದೆಹಲಿ: ಮುಂಬೈ- ದುರ್ಗಾಪುರ ನಡುವೆ ಭಾನುವಾರ ಸಂಚರಿಸುತ್ತಿದ್ದ ಸ್ಪೈಸ್‌ಜೆಟ್ ಸಂಸ್ಥೆಯ ವಿಮಾನವು ಇಳಿಯುವ ವೇಳೆ ಗಾಳಿಯ ಒತ್ತಡಕ್ಕೆ ಸಿಲುಕಿ ಅಲುಗಾಡಿದ್ದ ಪ್ರಕರಣದ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ತಂಡ ರಚಿಸಿರುವುದಾಗಿ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯದ (ಡಿಜಿಸಿಎ) ಮುಖ್ಯಸ್ಥರ ಅರುಣ್ ಕುಮಾರ್ ಸೋಮವಾರ ತಿಳಿಸಿದ್ದಾರೆ.
ವಿಮಾನದೊಳಗಿನ ತಲ್ಲಣದ ಸ್ಥಿತಿಯಿಂದ 15 ಮಂದಿ (12 ಪ್ರಯಾಣಿಕರು, ಮೂವರು ಕ್ಯಾಬಿನ್ ಸಿಬ್ಬಂದಿ) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಎಂಟು ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಸ್ಪೈಸ್‌ಜೆಟ್‌ನ ವಕ್ತಾರರು ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ 'ಸೀಟ್ ಬೆಲ್ಟ್' ಸಂಕೇತ ಆನ್‌ನಲ್ಲಿತ್ತು ಮತ್ತು ಪ್ರಯಾಣಿಕರನ್ನು ಕುಳಿತುಕೊಳ್ಳುವಂತೆ ವಿಮಾನ ಸಿಬ್ಬಂದಿ ಹಲವು ಬಾರಿ ಘೋಷಣೆಗಳನ್ನು ಮಾಡಿದ್ದರು ಎಂದು ಸ್ಪೈಸ್‌ಜೆಟ್ ತಿಳಿಸಿದೆ.
ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, 'ದುರ್ಗಾಪುರದಲ್ಲಿ ಇಳಿಯುವಾಗ ವಿಮಾನ ಅಲುಗಾಡಿದ್ದರಿಂದ ಪ್ರಯಾಣಿಕರಿಗೆ ಹಾನಿಯಾಗಿದೆ. ಇದು ದುರದೃಷ್ಟಕರ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ತನಿಖೆಗೆ ಡಿಜಿಸಿಎ ತಂಡವನ್ನು ನಿಯೋಜಿಸಿದೆ' ಎಂದು ಹೇಳಿದ್ದಾರೆ.
'ತನಿಖೆ ಪೂರ್ಣಗೊಂಡ ನಂತರ ಕಾರಣಗಳ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು' ಎಂದು ಅವರು ತಿಳಿಸಿದ್ದಾರೆ.