ಬದಿಯಡ್ಕ: ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ ಪ್ರಸಿದ್ದ ದಾಸ ಸಂಕೀರ್ತನಕಾರ ಮದ್ವೇಶ ವಿಠಲದಾಸ ಶ್ರೀರಾಮಕೃಷ್ಣ ಕಾಟುಕುಕ್ಕೆ ಅವರ ಮಾತೃಶ್ರೀ ರತ್ನಾವತಿ ರಾವ್ ಅವರು ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಭೇಟಿ ನೀಡಿ ಧನ ಸಹಾಯ ಹಸ್ತಾಂತರಿಸಿ ವೃದ್ದರ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭ ಮಾತನಾಡಿದ ಮದ್ವೇಶ ವಿಠಲದಾಸ ಶ್ರೀರಾಮಕೃಷ್ಣ ಕಾಟುಕುಕ್ಕೆ ಅವರು ಅನಾಥರಾದ ವೃದ್ದರ ಲಾಲನೆ ಪಾಲನೆಗೆ ಇಂತಹದೊಂದು ಅಚ್ಚುಕಟ್ಟಿನ ವ್ಯವಸ್ಥೆ ಅಗತ್ಯವಾಗಿದೆ. ಸಹೃದಯರ ನೆರವಿನೊಂದಿಗೆ ಅನಾಥರ ಬಾಳಿಗೆ ಬೆಳಕಾದಾಗ ಈಶ ಸೇವೆ ಸಾರ್ಥಕವಾಗುವುದು ಎಂದರು.
ರತ್ನಾವತಿ ರಾವ್, ಉಮಾ ರಾಮಕೃಷ್ಣ, ಆದಿತ್ಯ, ಕವನ ಹಾಗೂ ಆಶ್ರಯ ಆಶ್ರಮದ ಆಡಳಿತ ಟ್ರಸ್ಟಿ ಶ್ರೀಕೃಷ್ಣ ಭಟ್ ಪುದುಕೋಳಿ ಉಪಸ್ಥಿತರಿದ್ದರು.