ನ್ಯೂಯಾರ್ಕ್: ಇತ್ತೀಚೆಗಷ್ಟೇ ಟ್ವೀಟರ್ ಅನ್ನು ಖರೀದಿಸಿದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಸೋಮವಾರ ಮಾಡಿದ ಟ್ವೀಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಎಲಾನ್ ಮಸ್ಕ್ ಅವರು ತಮ್ಮ ಸಾವಿನ ಬಗ್ಗೆ ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದು, ವಾಣಿಜ್ಯ ಕ್ಷೇತ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
'ಒಂದು ವೇಳೆ ನಾನು ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದರೆ, ಅದರ ಕಾರಣ ನಿಮಗೆ ತಿಳಿದಿದೆ' ಎಂದು ಅಮೆರಿಕ ಮೂಲದ ಎಲೆಕ್ಟ್ರಿಕ್ ಕಾರ್ ಮೇಜರ್ ಟೆಸ್ಲಾ ಮತ್ತು ಅಮೆರಿಕನ್ ಏರೋಸ್ಪೇಸ್ ಕಂಪನಿ ಸ್ಪೇಸ್‌ಎಕ್ಸ್‌ನ ಸಿಇಒ ಆಗಿರುವ 50 ವರ್ಷದ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ಅವರ ಈ ಟ್ವೀಟ್‌ಗೆ ಸಾವಿರಾರು ಜನ ರಿಟ್ವೀಟ್ ಮಾಡಿದ್ದು, 'ನೀವು ಸಾಯುವುದಿಲ್ಲ, ಪ್ರಪಂಚದ ಸುಧಾರಣೆಗಾಗಿ ನೀವು ಬೇಕಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಟ್ವೀಟ್ ಅನ್ನು ಎಲಾನ್ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ ಅವರು ಸಹ ನೋಡಿದ್ದು, ಅವರ ಪೋಸ್ಟ್‌ಗೆ "ಇದು ತಮಾಷೆಯಲ್ಲ!" ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ. "ಕ್ಷಮಿಸಿ! ನಾನು ಜೀವಂತವಾಗಿರಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ" ಮಸ್ಕ್ ತನ್ನ ತಾಯಿಗೆ ಪ್ರತಿಕ್ರಿಯಿಸಿದ್ದಾರೆ.