HEALTH TIPS

ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಪರಿಚಯಿಸುವ ಕಾಲ ಬಂದಿದೆ: ಸಿಜೆಐ ರಮಣ

                ನವದೆಹಲಿ:ದೇಶದಲ್ಲಿ ಹಿಂದಿ ಹಾಗೂ ಭಾಷಾ ವೈವಿದ್ಯತೆ ಕುರಿತಂತೆ ಚರ್ಚೆ ನಡೆಯುತ್ತಿರುವ ನಡುವೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸುವ ಕಾಲ ಬಂದಿದೆ ಎಂದು ಶನಿವಾರ ಹೇಳಿದ್ದಾರೆ.

            ದಿಲ್ಲಿಯ ವಿಜ್ಞಾನ ಭವನದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜಂಟಿ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

             ಸಾಂವಿಧಾನಿಕ ನ್ಯಾಯಾಲಯಗಳ ಮಂದೆ ನಡೆಸಲಾಗುವ ವಕಾಲತ್ತು ಬುದ್ಧಿವಂತಿಕೆ ಹಾಗೂ ಕಾನೂನಿನ ತಿಳಿವಳಿಕೆಯನ್ನು ಆಧರಿಸಿರಬೇಕು ಹೊರತು ಭಾಷಾ ಪ್ರಾವಿಣ್ಯತೆಯನ್ನು ಆಧರಿಸಿ ಅಲ್ಲ ಎಂದು ಅವರು ಹೇಳಿದರು.

             ' 'ನಮ್ಮ ಪ್ರಜಾಪ್ರಭುತ್ವದ ನ್ಯಾಯಾಂಗ ಹಾಗೂ ಪ್ರತಿ ಇತರ ಸಂಸ್ಥೆಗಳು ದೇಶದ ಸಾಮಾಜಿಕ ಹಾಗೂ ಭೌಗೋಳಿಕ ವೈವಿದ್ಯತೆಯ ಕನ್ನಡಿಯಾಗಬೇಕು. ಉಚ್ಚ ನ್ಯಾಯಾಲಯದ ಮುಂದೆ ವಕಾಲತ್ತು ನಡೆಸಲು ಸ್ಥಳೀಯ ಭಾಷೆಯನ್ನು ಬಳಸುವಂತೆ ನಾನು ಅನೇಕ ಅಹವಾಲುಗಳನ್ನು ಸ್ವೀಕರಿಸಿದ್ದೇನೆ'' ಎಂದು ಅವರು ಹೇಳಿದ್ದಾರೆ. ''ಈ ಬೇಡಿಕೆ ಪರಿಗಣಿಸಲು ಹಾಗೂ ತಾರ್ಕಿಕ ಅಂತ್ಯ ನೀಡಲು ಈಗ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ.

             ಸಾಂವಿಧಾನಿಕ ನ್ಯಾಯಾಲಯದಲ್ಲಿ ವಕಾಲತ್ತು ಒಬ್ಬರ ಬುದ್ದಿವಂತಿಕೆ ಹಾಗೂ ಕಾನೂನಿನ ತಿಳುವಳಿಕೆಯನ್ನು ಆಧರಿಸಿರಬೇಕೇ ಹೊರತು ಭಾಷೆಯ ಪ್ರಾವಿಣ್ಯತೆಯನ್ನು ಆಧರಿಸಿ ಅಲ್ಲ'' ಎಂದು ರಮಣ ಅವರು ಹೇಳಿದರು. ಭಾರತದಲ್ಲಿ 'ನ್ಯಾಯದ ಲಭ್ಯತೆ'ಯ ಪರಿಕಲ್ಪನೆಯು ನ್ಯಾಯಾಲಯದ ಮುಂದೆ ಪ್ರತಿನಿಧೀಕರಣಕ್ಕೆ ಸುಲಭವಾಗಿ ವಕೀಲರನ್ನು ಒದಗಿಸುವುದಕ್ಕಿಂತ ಹೆಚ್ಚು ವಿಸ್ತಾರವಾದುದು ಎಂದು ಅವರು ಹೇಳಿದರು.

             ''ಇಡೀ ಜಗತ್ತಿನಲ್ಲಿ ಉತ್ತಮ ಉಚಿತ ಕಾನೂನು ಸೇವೆ ನೀಡುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ'' ಎಂದು ಅವರು ತಿಳಿಸಿದರು. ತಾನು ನ್ಯಾಯ ನೀಡುವ ವ್ಯವಸ್ಥೆಯನ್ನು ಭಾರತೀಕರಣಗೊಳಿಸುವ ಪ್ರಬಲ ಪ್ರತಿಪಾದಕ ಎಂದು ರಮಣ ಅವರು ಹೇಳಿದರು.

                            ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆ ಬಳಕೆಗೆ ಪ್ರಧಾನಿ ಕರೆ

           ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕರೆ ನೀಡಿದ್ದಾರೆ. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮಾನ್ಯ ಪ್ರಜೆಯ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಹಾಗೂ ಅವರಲ್ಲಿ ಹೆಚ್ಚು ನಂಟಿನ ಭಾವನೆಯನ್ನು ಉಂಟು ಮಾಡಲಿದೆ ಎಂದು ಅವರು ಪ್ರತಿಪಾದಿಸಿದರು.

            ಕಾರಾಗೃಹಗಳಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಆದ್ಯತೆ ನೀಡಿ. ಅವರನ್ನು ಮಾನವ ಸಂವೇದನಾಶೀಲತೆಯ ಆಧಾರದಲ್ಲಿ ಕಾನೂನಿನ ಪ್ರಕಾರ ಬಿಡುಗಡೆ ಮಾಡಿ ಎಂದು ಅವರು ಹೇಳಿದರು. ಅಲ್ಲದೆ, ನ್ಯಾಯಾಂಗ ಸುಧಾರಣೆ ಕೇವಲ ನೀತಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ ಎಂದು ಅವರು ಪ್ರತಿಪಾದಿಸಿದರು.

            ಕೈದಿಗಳ ಬಿಡುಗಡೆ ಮಾನವ ಸಂವೇದನಾಶೀಲತೆಯನ್ನು ಒಳಗೊಂಡಿರುತ್ತದೆ ಹಾಗೂ ಅದನ್ನು ಚರ್ಚೆಯ ಕೇಂದ್ರದಲ್ಲಿ ಇರಿಸಬೇಕು ಎಂದು ಪ್ರಧಾನಿ ಅವರು ಹೇಳಿದರು. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ಇದೆ. ಆದುದರಿಂದ ಈ ಪ್ರಕರಣಗಳನ್ನು ಸಾಧ್ಯವಾದಾಗಲೆಲ್ಲ ವಿಚಾರಣೆ ನಡೆಸಬಹುದು. ಅಂತಹ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಅವರು ಹೇಳಿದರು. ಮಾನವ ಸಂವೇದನಾಶೀಲತೆ ಆಧಾರದಲ್ಲಿ ಹಾಗೂ ಕಾನೂನಿನ ಪ್ರಕಾರ ಈ ಪ್ರಕರಣಗಳಿಗೆ ಆದ್ಯತೆ ನೀಡುವಂತೆ ನಾನು ಮುಖ್ಯಮಂತ್ರಿಗಳು ಹಾಗೂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

             6 ವರ್ಷಗಳ ಅಂತರದ ಬಳಿಕ ನಡೆಯುತ್ತಿರುವ ಮುಖ್ಯಮಂತ್ರಿಗಳು ಹಾಗೂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶದ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಈ ಸಮಿತಿ ಎರಡು ಮಾದರಿಯಲ್ಲಿ ಕಾನೂನು ರೂಪಿಸಲು ಪ್ರಯತ್ನಿಸುತ್ತಿದೆ-ಒಂದು ಟಿಪಿಕಲ್ ಕಾನೂನು ಭಾಷೆಯಲ್ಲಿ ಹಾಗೂ ಇನ್ನೊಂದು ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಎಂದರು. ನ್ಯಾಯಾಯದ ಕಲಾಪದ ವಿಷಯದ ಕುರಿತಂತೆ ಪ್ರಧಾನಿ ಅವರು, ನಾವು ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಯನ್ನು ಉತ್ತೇಜಿಸುವ ಅಗತ್ಯತೆ ಇದೆ. ಇದು ಸಾಮಾನ್ಯ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಅವರಲ್ಲಿ ಹೆಚ್ಚು ನಂಟಿನ ಭಾವನೆಯನ್ನು ಉಂಟು ಮಾಡಲಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries