ನವದೆಹಲಿ: ದೇಶದ್ರೋಹ ಕಾನೂನಿನ ಬಳಕೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಲಕ್ಷ್ಮಣ ರೇಖೆಯ ಉಲ್ಲೇಖ ಮಾಡಿದ್ದಾರೆ.
ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ವಿವಿಧ ಸಂಸ್ಥೆಗಳನ್ನುದ್ದೇಶಿಸಿ ಈ ಉಲ್ಲೇಖ ಮಾಡಿರುವ ಕಿರಣ್ ರಿಜಿಜು, ಯಾರೂ ಲಕ್ಷ್ಮಣ ರೇಖೆಯನ್ನು ದಾಟಬಾರದು ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ ನಿರ್ದೇಶನದ ಬೆನ್ನಲ್ಲೇ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಪರಸ್ಪರ ಗೌರವ ಹೊಂದಿದ್ದೇವೆ. ನ್ಯಾಯಾಲಯಗಳು ಸರ್ಕಾರ ಹಾಗೂ ಶಾಸಕಾಂಗವನ್ನು ಗೌರವಿಸಬೇಕು, ಸರ್ಕಾರ, ಶಾಸಕಾಂಗ ನ್ಯಾಯಾಂಗವನ್ನು ಗೌರವಿಸಬೇಕು. ಸೀಮಾರೇಖೆ ಸ್ಪಷ್ಟವಿದೆ. ಲಕ್ಷ್ಮಣ ರೇಖೆ ಯಾರಿಂದಲೂ ದಾಟಲ್ಪಡಬಾರದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಬ್ರಿಟಿಷರ ಕಾಲದ ದೇಶದ್ರೋಹ ಕಾನೂನಿನ ಮರುಪರಿಶೀಲನೆ ಪೂರ್ಣಗೊಳ್ಳುವವರೆಗೆ ತಡೆಹಿಡಿಯಲಾಗಿದೆ. ಸದ್ಯಕ್ಕೆ ದೇಶದ್ರೋಹ ಆರೋಪದಡಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.
ದೇಶದ್ರೋಹ ಕಾನೂನಿನ ಕುರಿತ ವಿಚಾರಣೆಯನ್ನು ಕೋರ್ಟ್ ಜುಲೈ ಮೂರನೇ ವಾರಕ್ಕೆ ಮುಂದೂಡಿದೆ.