ಜಮ್ಮು: ಸ್ಫೋಟಕಗಳನ್ನು ತುಂಬಿಕೊಂಡು ಸಾಗುತ್ತಿದ್ದ ಪಾಕಿಸ್ತಾನ ಮೂಲದ ಡ್ರೋನ್ ಅನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ಹೊಡೆದುರುಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಗಡಿಯಿಂದ ಬರುತ್ತಿದ್ದ ಅನುಮಾನಾಸ್ಪದ ಡ್ರೋನ್ ಅನ್ನು ಗುರುತಿಸಿದ ಭದ್ರತಾ ಸಿಬ್ಬಂದಿಗಳು ಕೂಡಲೇ ಎಚ್ಚೆತ್ತು ಅದನ್ನು ಹೊಡೆದುರುಳಿಸಿದ್ದಾರೆ.
ಈ ವೇಳೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅದರಲ್ಲಿ ಏಳು ಮ್ಯಾಗ್ನೆಟಿಕ್ ಬಾಂಬ್ಗಳು, ಏಳು ಯುಬಿಜಿಎಲ್ (ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್) ಗ್ರೆನೇಡ್ಗಳು ಇರುವುದು ಪತ್ತೆಯಾಗಿದೆ. ಈ ಶಸ್ತ್ರಗಳನ್ನು ಉಗ್ರರಿಗೆ ಸರಬರಾಜು ಮಾಡಲು ಯತ್ನಿಸಲಾಗುತ್ತಿತ್ತು ಎನ್ನಲಾಗಿದೆ.
ಭಾನುವಾರ ಪೊಲೀಸರ ಶೋಧನಾ ತಂಡ ಹೊಡೆದುರುಳಿಸಿದ ಡ್ರೋನ್ ಅನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, 'ತಳ್ಳಿ ಹರಿಯ ಚಕ್ ಪ್ರದೇಶದಲ್ಲಿ ಬೆಳಿಗ್ಗೆ ಅಂತeರಾಷ್ಟ್ರೀಯ ಗಡಿ ದಾಟಿ ಬಂದ ಡ್ರೋನ್ ಅನ್ನು ನಮ್ಮ ಶೋಧನಾ ತಂಡ ಗುರುತಿಸಿ, ಗುಂಡು ಹಾರಿಸಿ ಧರೆಗುರುಳಿಸಿದೆ. ಡ್ರೋನ್ನ ಪೇಲೋಡ್ ಅನ್ನು ಬಾಂಬ್ ನಿಷ್ಕ್ರಿಯ ದಳವು ಪರೀಕ್ಷಿಸಿದಾಗ ಮ್ಯಾಗ್ನೆಟಿಕ್ ಬಾಂಬ್ಗಳು ಮತ್ತು ಯುಬಿಜಿಎಲ್ ಗ್ರೆನೇಡ್ಗಳು ಅದರಲ್ಲಿ ಪತ್ತೆಯಾಗಿವೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರರು ಹೇಳಿದರು.
ಗಡಿಯಾಚೆಯಿಂದ ಆಗಾಗ ಡ್ರೋನ್ ಮೂಲಕ ಇಂತಹ ಚಟುವಟಿಕೆಗಳು ನಡೆಯುತ್ತಿದ್ದು, ಪೊಲೀಸ್ ಶೋಧನಾ ತಂಡಗಳು ಆ ಪ್ರದೇಶದಲ್ಲಿ ನಿರಂತರ ನಿಗಾವಹಿಸಿವೆ ಎಂದು ಅವರು ಹೇಳಿದರು.
ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹೆಯ ವಾರ್ಷಿಕ 43 ದಿನಗಳ ಯಾತ್ರೆಯು ಜೂನ್ 30ರಂದು ಆರಂಭವಾಗಲಿದ್ದು, ಈ ಘಟನೆಯಿಂದಾಗಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.