ನವದೆಹಲಿ: ನ್ಯಾಯಾಲಯದ ಆದೇಶದ ಮೇರೆಗೆ ನಡೆದ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯ ವೀಡಿಯೊ ದೃಶ್ಯಾವಳಿಗಳು ಮತ್ತು ಚಿತ್ರಗಳು ಸೋಮವಾರ, ಮೇ 31 ರಂದು ಸೋರಿಕೆಯಾಗಿದೆ ಎಂದು ವರದಿಯಾಗಿದೆ.
Hindustantimes.com ವರದಿಯ ಪ್ರಕಾರ, ಸಮೀಕ್ಷೆಯ ಚಿತ್ರಗಳು ಮತ್ತು ದೃಶ್ಯಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದು, ಕೆಲವು ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ.
ಇದಕ್ಕೂ ಮುನ್ನ ಸೋಮವಾರ, ವಾರಣಾಸಿ ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ಪ್ರಕರಣದ ಐವರು ಅರ್ಜಿದಾರರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕರಣದ ಕಕ್ಷಿದಾರರೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಸಮೀಕ್ಷೆಯ ಚಿತ್ರಗಳು ಮತ್ತು ದೃಶ್ಯಾವಳಿಗಳನ್ನು ಮೇ 19 ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಐವರು ಹಿಂದೂ ಮಹಿಳಾ ಅರ್ಜಿದಾರರು ಸಮೀಕ್ಷೆಯ ಫಲಿತಾಂಶಗಳಿಗೆ ಒತ್ತಾಯಿಸಿದರೆ, ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ನೋಡಿಕೊಳ್ಳುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಸಮೀಕ್ಷೆಯ ಫಲಿತಾಂಶಗಳನ್ನು ಸಾರ್ವಜನಿಕಗೊಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.
ಕಕ್ಷಿದಾರರೊಂದಿಗೆ ಹಂಚಿಕೊಳ್ಳಲಾದ ಯಾವುದೇ ಚಿತ್ರಗಳು ಅಥವಾ ದೃಶ್ಯಾವಳಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಅನಧಿಕೃತ ಬಳಕೆಗೆ ಬಳಸಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಅದಾಗ್ಯೂ, ಕಕ್ಷಿದಾರರೊಂದಿಗೆ ಹಂಚಿಕೊಂಡ ಬೆನ್ನಲ್ಲೇ ಸಮೀಕ್ಷೆಯ ದೃಶ್ಯ, ಚಿತ್ರಗಳು ಸೋರಿಕೆಯಾಗಿದೆ.
ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ವಕೀಲ ಅಭಯನಾಥ್ ಯಾದವ್, ಅರ್ಜಿದಾರರಲ್ಲಿ ಒಬ್ಬರು ಸಮೀಕ್ಷೆಯ ದೃಶ್ಯಗಳನ್ನು ಸೋರಿಕೆ ಮಾಡಿದ್ದಾರೆ, ಇದು "ಪಿತೂರಿ" ಮತ್ತು "ಸಾರ್ವಜನಿಕರನ್ನು ಗೊಂದಲಗೊಳಿಸುವ ಪ್ರಯತ್ನ" ಎಂದು ಹೇಳಿದ್ದಾರೆ.