ಕಾಸರಗೋಡು: ಜಿಲ್ಲೆಯಲ್ಲಿ ಆಹಾರ ವಿಷಬಾಧೆ ಪ್ರಕರಣ ತಡೆಗಟ್ಟುವ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹೋಟೆಲ್, ರೆಸ್ಟೋರೆಂಟ್, ವ್ಯಾಪಾರ ಮತ್ತು ಕೈಗಾರಿಕೆಗಳ ಮಾಲೀಕರು ಮತ್ತು ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕಾಞಂಗಾಡಿನ ರಾಷ್ಟ್ರೀಯ ಆರೋಗ್ಯ ಮಿಷನ್ ಸಭಾಂಗಣದಲ್ಲಿ ಜರುಗಿತು.
ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಹಾರ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಗಳು ಸಂಗ್ರಹಿಸಿದ ಕುಡಿಯುವ ನೀರಿನ ಮಾದರಿಗಳಲ್ಲಿರೋಗಕಾರಕ ಬ್ಯಾಕ್ಟೀರಿಯಾಗಳ ಅಂಶ ಪತ್ತೆಯಾಗಿರುವುದಲ್ಲದೆ, ಕೆಲವು ಸಂಸ್ಥೆಗಳಲ್ಲಿ ಶುಚಿತ್ವದ ಕೊರತೆ ಗಮನಕ್ಕೆ ಬಂದಿದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ತೀವ್ರಗೊಳಿಸಲು ಸಭೆ ನಿರ್ಧರಿಸಿತು. ಹೋಟೆಲ್‍ಗಳು ಮತ್ತು ಆಹಾರ ತಯಾರಿಕೆ ಮತ್ತು ವಿತರಣಾ ಘಟಕಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಆಹಾರದ ನೈರ್ಮಲ್ಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.
ಆಹಾರ ತಯಾರಿ ಹಾಗೂ ನಿರ್ವಹಣೆ ಮಾಡುವವರಿಗೆ ಕಡ್ಡಾಯ ಆರೋಗ್ಯ ಕಾರ್ಡ್ ವಿತರಿಸುವುದು, ಕಾರ್ಮಿಕರಲ್ಲಿ ಪಾಕಶಾಲೆಯ ಶುಚಿತ್ವ ಮತ್ತು ವೈಯಕ್ತಿಕ ನೈರ್ಮಲ್ಯ ಖಚಿತಪಡಿಸುವ ಬಗ್ಗೆ ಜಾಗೃತಿ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುವುದು. ಕಾರ್ಮಿಕರು ಏಪ್ರನ್ ಗ್ಲೌಸ್ ಮತ್ತು ಹೆಡ್ ಕ್ಯಾಪ್ ಕಡ್ಡಾಯ ಧರಿಸುವಂತೆಯೂ ಸಭೆಯಲ್ಲಿ ಸೂಚಿಸಲಾಯಿತು.
ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ. ರಾಮದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ. ಎ.ಟಿ. ಮನೋಜ್, ಆಹಾರ ಸುರಕ್ಷತಾ ಅಧಿಕಾರಿಗಳಾದ ಕೆ.ಸುಜಯನ್, ಕೆ.ಪಿ.ಮುಸ್ತಫಾ, ಎಸ್.ಹೇಮಾಂಬಿಕಾ, ಜಿಲ್ಲಾ ವಿಬಿಡಿ ಅಧಿಕಾರಿ ವಿ.ಸುರೇಶನ್, ತಾಂತ್ರಿಕ ಸಹಾಯಕ ಕೆ.ಪಿ.ಜಯಕುಮಾರ್, ಇತರ ಅಧಿಕಾರಿಗಳು, ವ್ಯಾಪಾರಿಗಳು , ಹೋಟೆಲ್ ಮತ್ತು ರೆಸ್ಟೋರೆಂಟ್ ಬೇಕರಿಗಳ ಸಂಘ ಹಾಗೂ ಆಹಾರ ಕ್ಷೇತ್ರದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.