ಕಾಸರಗೋಡು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯೋಜನಾ ವಿಭಾಗದ ಲಭ್ಯತೆ ಇಲ್ಲದಿರುವುದರಿಂದ ಸಮಸ್ಯೆ ತಲೆದೋರಿದ್ದು, ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಿರುವುದಾಗಿ ವಿಧಾನಸಭೆಯ ಸಾರ್ವಜನಿಕ ವಲಯದ ಉದ್ಯಮಗಳ ಸಮಿತಿ ಅಧ್ಯಕ್ಷ ಇ. ಚಂದ್ರಶೇಖರನ್ ಶಾಸಕರು ತಿಳಿಸಿದ್ದಾರೆ
ಅವರು ಕಾಸರಗೋಡು ಸರ್ಕಾರಿ ಅತಿಥಿ ಗೃಹದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ವಲಯದ ಉದ್ಯಮಗಳ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಿದರು. ಕೇರಳ ಜಲ ಪ್ರಾಧಿಕಾರದ ವಿವಿಧ ಸಮಸ್ಯೆಗಳ ಅಧ್ಯಯನ ನಡೆಸಲು ವಿಧಾನ ಸಭಾ ಸಮಿತಿ ಜಿಲ್ಲೆಗೆ ಭೇಟಿ ನೀಡಿತ್ತು.
ಮುಳಿಯಾರ್, ಚೆಂಗಳ, ಮಧೂರು ಮತ್ತು ಚೆಮ್ಮನಾಡು ಪಂಚಾಯಿತಿಗಳಲ್ಲಿ ತುರ್ತಾಗಿ ನಡೆಯುವ ಕೆಲವೊಂದು ಕೆಲಸಗಳು ಬಾಕಿಯಿದ್ದು, ನೀರು ವಿತರಣೆಗೆ ಮತ್ತಷ್ಟು ಕಾಲಾವಕಾಶ ಬೇಕಾಗಿಬರಲಿದೆ. ನೀರು ಪೂರೈಕೆಗೆ ಪೈಪು ಅಳವಡಿಸಲಿರುವ ಭೂಮಿ ವಶಪಡಿಸುವ ಪ್ರಕ್ರಿಯೆ ತ್ವರಿತಗೊಳಿಸಲಾಗುವುದು ಎಂದೂ ತಿಳಿಸಿದರು. ಸಮಿತಿ ಸದಸ್ಯರು ಕಾಸರಗೋಡು ನಗರಸಭೆ ಮತ್ತು ಚೆಮ್ನಾಡ್ ಗ್ರಾಮ ಪಂಚಾಯಿತಿಗೆ ಶುದ್ಧ ನೀರು ಪೂರೈಕೆಗಾಗಿ ನಿರ್ಮಿಸಿರುವ ಬಾವಿಕ್ಕರ ನೀರು ಸಂಸ್ಕರಣಾ ಘಟಕ ಮತ್ತು ಬಾವಿಕ್ಕರ ಅಣೆಕಟ್ಟಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಿತು.
ಶಾಸಕರಾದ ಸಿ ಎಚ್ ಕುಂಞಂಬು, ಎನ್ ಎ ನೆಲ್ಲಿಕುನ್ನು, ಟಿ ವಿ ಇಬ್ರಾಹಿಂ, ಕೆ ಪಿ ಮೋಹನನ್, ಡಿ ಕೆ ಮುರಳಿ, ಉಬೈದುಲ್ಲಾ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಜಲ ಪ್ರಾಧಿಕಾರ ಉತ್ತರ ವಲಯ ಸಿ.ಇ. ಇ ಲೀನಾ ಕುಮಾರಿ, ಜಲ ಪ್ರಾಧಿಕಾರ ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.