ಕೇವಡಿಯಾ : 'ಭಾರತದಲ್ಲಿ ಕೋವಿಡ್ ಸಾವುಗಳ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಅಂದಾಜನ್ನು ನಾವು ಒಪ್ಪಿಕೊಳ್ಳುವುದಿಲ್ಲ' ಎಂಬ ನಿರ್ಣಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಮಂಡಳಿಯ 14ನೇ ಸಮ್ಮೇಳನವು ಅಂಗೀಕರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಶನಿವಾರ ಇಲ್ಲಿ ತಿಳಿಸಿದರು.
ಭಾರತದಲ್ಲಿ ಕೋವಿಡ್ ಸಾವಿನ ಅಧಿಕೃತ ಅಂಕಿಅಂಶಗಳನ್ನು ಕಡಿಮೆಯಾಗಿ ತೋರಿಸಲಾಗಿದೆ. ವಾಸ್ತವದಲ್ಲಿ ಭಾರತದಲ್ಲಿ 47 ಲಕ್ಷ ಜನರು ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಡಬ್ಲುಎಚ್‌ಒ ಅಂದಾಜಿಸಿದೆ. ಮೂರು ದಿನಗಳ 'ಸ್ವಾಸ್ಥ ಚಿಂತನ ಶಿಬಿರ 'ವು ಶನಿವಾರ ಇಲ್ಲಿ ಸಮಾರೋಪಗೊಂಡಿದ್ದು,ಎರಡನೇ ದಿನದ ಕಲಾಪದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಭಾರತದಲ್ಲಿ ಜನನಗಳು ಮತ್ತು ಮರಣಗಳ ನೋಂದಣಿ ವ್ಯವಸ್ಥೆಯು ಅತ್ಯಂತ ಸದೃಢವಾಗಿದೆ ಹಾಗೂ ಜನನಗಳು ಮತ್ತು ಮರಣಗಳ ನೋಂದಣಿ ಕಾಯ್ದೆ,1969ರ ವ್ಯಾಪ್ತಿಗೊಳಪಟ್ಟಿದೆ ಎಂದು ಮಾಂಡವೀಯ ಹೇಳಿದರು.
ಭಾರತವು ಪಾರದರ್ಶಕ ಮತ್ತು ಕಾನೂನು ಪ್ರಕ್ರಿಯೆಯ ಮೂಲಕ ತನ್ನ ಸಾವುಗಳನ್ನು ದಾಖಲಿಸುತ್ತದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರಿಯಾದ ಮತ್ತು ಅಧಿಕೃತವಾದ ದತ್ತಾಂಶಗಳನ್ನು ರಿಜಿಸ್ಟ್ರಿಗೆ ಸಲ್ಲಿಸುತ್ತವೆ ಎಂದರು.