ತ್ರಿಶೂರ್: ಎರಡು ವರ್ಷಗಳ ಅಂತರದ ಬಳಿಕ ತ್ರಿಶಿವಪೆರೂರಿನಲ್ಲಿ ಸಾವಿರಾರು ಮಂದಿ ಪೂರಂ ಪ್ರೇಮಿಗಳು ಸಂಭ್ರಮಾಚರಣೆ ಮುಗಿಲುಮುಟ್ಟುವುದರೊಂದಿಗೆ ಪರಂಪರೆಯನ್ನು ಮತ್ತೆ ನೆನಪಿಸಿತು. ವರ್ಣರಂಜಿತ ಕೊಡೆಗಳ ಆಗಸ ಮುಟ್ಟುವ ಆಟಗಳೊಂದಿಗೆ ದಕ್ಷಿಣ ಗೋಪುರದಲ್ಲಿ ಅಕ್ಷರಶಃ ಸ್ವರ್ಗ ಸದೃಶ ವಿಸ್ಮಯ ಕಂಡುಬಂತು. ವಿಶೇಷ ಛತ್ರಿಗಳು ಬಾನೆತ್ತರ ಹಾರುತ್ತಿರುವಂತೆ ಸಾವಿರಾರು ಜನರು ಹರ್ಷೋದ್ಗಾರ ಮಾಡಿದರು. ಕಳೆದ ಎರಡು ವರ್ಷಗಳಿಂದ ಸಿಗದ ಬಣ್ಣದ ಕೌತುಕವನ್ನು ಪೂರಪ್ರೇಮಿಗಳು ಮರಳಿ ಕಣ್ತುಂಬಿಕೊಂಡಿದ್ದಾರೆ.
ವಾಡಿಕೆಗಳಿಗಿಂತ ವಿಭಿನ್ನವಾಗಿ ಪೂರಂ ಮೆರವಣಿಗೆಯ ಮೊದಲು ಸಾವಿರಾರು ಮಂದಿ ದಕ್ಷಿಣ ಗೋಪುರದಲ್ಲಿ ಜಮಾಯಿಸಿದ್ದರು. ಗಂಟೆಗಟ್ಟಲೆ ಕಾದು ಕುಳಿತಿದ್ದ ಜನರ ಸಮ್ಮುಖದಲ್ಲಿ ಪರಮೇಕಾವು-ತಿರುವಂಬಾಡಿ ಭಗವತಿಯ ದಕ್ಷಿಣಾಭಿಷೇಕ ನಡೆಯಿತು. ಇಬ್ಬರು ದೇವತೆಗಳು ಮುಖಾಮುಖಿಯಾದಾಗ ಬಣ್ಣಬಣ್ಣದ ಕೊಡೆಗಳು ರಾರಾಜಿಸಿದವು.
ಅಲಂಕಾರದಲ್ಲಿ ಪ್ರದರ್ಶಿಸದ ವಿಶೇಷ ಛತ್ರಿಗಳನ್ನು ಮೇಲಕ್ಕೆತ್ತಿದಾಗ ಭಕ್ತಾಭಿಮಾನಿಗಳ ಹರ್ಷೋದ್ಗಾರ ಅಕ್ಷರಶಃ ವಿಭಿನ್ನ ಪ್ರಪಂಚ ಸೃಷ್ಟಿಸಿದಂತಿತ್ತು. ಅಷ್ಟರಲ್ಲಿ ಮಳೆ ಸುರಿಯ ತೊಡಗಿತು. ಆದರೆ ತುಂತುರು ಮಳೆಯಲ್ಲೂ ಪೂರಂ ಪ್ರೇಮಿಗಳ ಸಂಭ್ರಮ ತಗ್ಗಿರಲಿಲ್ಲ. ಎಲ್ ಇ ಡಿಯಲ್ಲಿ ಅಲಂಕರಿಸಲಾಗಿದ್ದ ವರ್ಣಮಯ ಛತ್ರಿಗಳು ಮತ್ತು ವಿಶೇಷ ಛತ್ರಿಗಳನ್ನು ಎತ್ತರೆತ್ತರಕ್ಕೆ ಎತ್ತಿ ಪ್ರದರ್ಶಿಸಿದರು. ನಂತರ ಭಗವತಿ ಮರಳಿತು.
ನಿನ್ನೆ ಬೆಳಿಗ್ಗೆ 7 ಗಂಟೆಗೆ ಪೂರಂ ಆಚರಣೆ ಅಧಿಕೃತವಾಗಿ ಆರಂಭವಾಯಿತು. ಕಣಿಮಂಗಲಂ ಶಾಸ್ತಾವು ಪೂರ ನಡೆಯುವ ಅಂಗಣಕ್ಕೆ ಆಗಮನದೊಂದಿಗೆ ಕಿರು ಪೂರಂ ಆಚರಣೆಗಳು ಆರಂಭಗೊಂಡವು. ಬೆಳಗ್ಗೆ 11 ಗಂಟೆಗೆ ಹಳೆ ಪಾದಚಾರಿ ಮಾರ್ಗಕ್ಕೆ ಆಗಮಿಸಿ ಪಂಚವಾದ್ಯ ಮೊಳಗಿತು. ಅಧಿಕಾರಿ ಕೊಂಗಾಡ್ ಮಧು ಇದ್ದರು. ಮಧ್ಯಾಹ್ನ 12.30ಕ್ಕೆ ಪೆರುವನಂ ಕುಟ್ಟನ್ ಮಾರಾರ್ ಚೆಂಡೆ ತಂಡದ ಮೇಳಂ ಗಮನ ಸೆಳೆಯಿತು. ಎರಡು ಗಂಟೆಗೆ ವಡಕ್ಕುಂನಾಥ ದೇವಸ್ಥಾನದಲ್ಲಿ ಪ್ರಸಿದ್ಧ ಎಳಂಜಿತರ ಮೇಳ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಶ್ರೀಮೂಲಸ್ಥಾನದಲ್ಲಿ ಪಾಂಡಿಮೇಳ ನಡೆಯಿತು.
ಬಳಿಕ ಸಂಜೆ 5.30ಕ್ಕೆ ವರ್ಣರಂಜಿತ ಮೆರವಣಿಗೆ ಆರಂಭವಾಯಿತು. ಇಂದು ಸಿಡಿಮದ್ದು ಪ್ರದರ್ಶನ ನಡೆದ ಬಳಿಕ ಹಗಲು ಉತ್ಸವನಡೆಯಲಿದೆ.