ಜೈಪುರ: ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಡಿತಗೊಳಿಸಿದ ಬೆನ್ನಿಗೇ, ರಾಜಸ್ಥಾನ, ಕೇರಳ ಮತ್ತು ಒಡಿಶಾ ಸರ್ಕಾರಗಳೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತ ಮಾಡಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ‘ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತಗೊಳಿಸಿರುವುದರಿಂದ, ರಾಜ್ಯ ಸರ್ಕಾರವು ಪೆಟ್ರೋಲ್ ಮೇಲೆ ಲೀಟರ್‌ಗೆ 2.48ರೂ ಮತ್ತು ಡೀಸೆಲ್‌ಗೆ 1.16 ರೂರಷ್ಟು ವ್ಯಾಟ್ ಕಡಿಮೆ ತಗ್ಗಿಸಲಿದೆ. ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ 10.48ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 7.16ರೂ ಅಗ್ಗವಾಗಲಿದೆ’ ಎಂದು ತಿಳಿಸಿದರು.
ಒಡಿಶಾ, ಕೇರಳದಿಂದಲೂ ಇಂಧನ ತೆರಿಗೆ ಕಡಿತ:
ರಾಜಸ್ಥಾನದ ಬೆನ್ನಲ್ಲೇ ಕೇರಳ ಸರ್ಕಾರ ಮತ್ತು ಒಡಿಶಾ ಸರ್ಕಾರಗಳೂ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಕಡಿತ ಮಾಡಿದ್ದು, ಕೇರಳ ಲೀಟರಿಗೆ 2.41 ರೂ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ 1.36 ರೂ ಇಳಿಕೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು, ‘ಕೇಂದ್ರ ಸರ್ಕಾರ ಇಂಧನದ ಮೇಲೆ ಭಾರಿ ತೆರಿಗೆ ವಿಧಿಸುತ್ತದೆ. ಈಗ ಭಾಗಶಃ ಕಡಿತ ಮಾಡಿದೆ. ಆದರೂ, ಕೇಂದ್ರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಒಡಿಶಾ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ ಕ್ರಮವಾಗಿ 2.23 ಮತ್ತು 1.36 ರೂ. ಕಡಿತ ಮಾಡಿ ಆದೇಶ ಹೊರಡಿಸಿದೆ.
ಇದಕ್ಕೂ ಮೊದಲು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ 8ರೂ ಮತ್ತು 6ರೂ ಕಡಿತ ಮಾಡಿತ್ತು. ‘ಎಕ್ಸೈಸ್ ಸುಂಕ ಕಡಿತದಿಂದಾಗಿ ಪೆಟ್ರೋಲ್ ಮಾರಾಟ ದರವು ಲೀಟರಿಗೆ 9.5 ಮತ್ತು ಡೀಸೆಲ್ ದರವು ಲೀಟರಿಗೆ 7ರೂ ರಷ್ಟು ಕಡಿಮೆ ಆಗಿದೆ. ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಿಳಿಸಿದ್ದರು.