HEALTH TIPS

ಬೇಸಿಗೆಯ ಸುಖ ನೆನೆನೆನೆದು ತಂಪಾಗೋಣ ಬನ್ನಿ

             ಬೇಸಿಗೆ ಎಂದರೆ ಹಣ್ಣುಗಳ ರಾಜನ ದರ್ಶನ, ಬೇಸಿಗೆ ಎಂದರೆ ಹಪ್ಪಳ-ಸಂಡಿಗೆಯಂತಹ ಕುರುಕಲು ತಿಂಡಿಗಳ ಸಮಾರಾಧನೆ, ಬೇಸಿಗೆ ಎಂದರೆ ತಂಪಿನ ಬೆಲೆಯನ್ನು ನೆನಪಿಸುವ ಸಮಯ, ಬೇಸಿಗೆ ಎಂದರೆ ಮಳೆಗೆ ಭೂಮಿಯನ್ನು ಹದಮಾಡುವ ಸಾಧನ. ಒಂದು ಮಧ್ಯಾಹ್ನದ ಉರಿಬಿಸಿಲಿನಲಿ ಕುಳಿತು ಬಿಸಿಲಿನ ಕುರಿತು ಧೇನಿಸಿದಾಗ...

        ಬೇಸಿಗೆಯ ಸುಡುಸುಡು ಬಿಸಿಲೆಂದರೆ ಎಲ್ಲರೂ ಉಸ್ಸಪ್ಪ ಎನ್ನುವವರೇ. ಈ ಬೇಸಿಗೆಯೆಂಬ ಮಾಯಾವಿಗೆ ಚಳಿಗಾಲದ ನಂಟಸ್ತಿಕೆಯೂ ಮಳೆಗಾಲದ ಬಾಂಧವ್ಯವೂ ಚೆನ್ನಾಗಿಯೇ ಇದೆ. ಪ್ರತಿವರ್ಷವೂ ಚಳಿಗಾಲದ ಕೈ ಹಿಡಿದೇ ಬೇಸಿಗೆರಾಯ ನಡಿಗೆ ಕಲಿತು ಓಡುವುದು; ಹಾಗೆಯೇ ಮಳೆಗಾಲದ ಕೈಹಿಡಿದು ನಡಿಗೆ ಕಲಿಸಿ, ತಾ ಹಿಂದುಳಿಯುವುದು.

           ಸೂರ್ಯನ ಗತಿಗೆ ಅನುಗುಣವಾಗಿಯೇ ದಕ್ಷಿಣಾಯಣ, ಉತ್ತರಾಯಣ ಎಂದು ವಿಭಾಗ ಮಾಡಿರುವುದು. ಸೂರ್ಯನ ಪ್ರಭಾವ ಮತ್ತು ಶಕ್ತಿಯೇ ಅಂಥದ್ದು. ಸೂರ್ಯ ತೀವ್ರವಾಗಿ ಆರ್ಭಟಿಸುವುದು ಬೇಸಿಗೆಕಾಲದಲ್ಲಿಯೇ. ನಮ್ಮ ಮೈಸೂರು ಭಾಗದ ಬೇಸಿಗೆಯ ಬೇಗೆ ಉತ್ತರ ಕರ್ನಾಟಕದಷ್ಟೋ ಕಲ್ಯಾಣ ಕರ್ನಾಟಕದಷ್ಟೋ ತೀವ್ರವೇನಲ್ಲ. ದೆಹಲಿಯನ್ನು ನೆನೆದರಂತೂ 'ಓಹ್ ದೇವರೇ ನೀ ಅಲ್ಲಿ ಹೇಗಿದ್ದೀ' ಎಂದು ಕೇಳುವಂತಾಗುತ್ತದೆ. ಆದರೂ ನಮ್ಮ ಬೇಸಿಗೆಯೇನೂ ತಂಪಲ್ಲ. ಸೂರ್ಯ ಮೈಕೊಡವಿ ನಿಲ್ಲುವಷ್ಟರಲ್ಲಿ ಮೈನೀರು ಇಂಗಿಯೇ ತೀರುತ್ತದೆ.

             ತಲೆಗೆ ಟೊಪ್ಪಿ, ಛತ್ರಿ, ಕಣ್ಣಿಗೆ ತಂಪು ಕನ್ನಡಕ ಹಾಕಿಕೊಂಡು, ಸಾಲದಾತ ಎಲ್ಲಿ ತನ್ನನ್ನು ಕಂಡು ಸಾಲ ಕೇಳುವನೋ ಎಂದು ಹೆದರಿ ಹೆದರಿ ಮನೆಯಿಂದ ಹೊರಬರುವ ಸಾಲಗಾರರಂತೆ ಬಿಸಿಲ ಝಳಕ್ಕೆ ಬೆದರಿ ಯೋಚಿಸಿ ಯೋಚಿಸಿ ಮನೆಯಿಂದ ಹೊರಗೆ ಕಾಲಿಡುತ್ತೇವೆ. ಎಷ್ಟೋ ಬಾರಿ 'ಧೈರ್ಯಂ ಸರ್ವತ್ರ ಸಾಧನಂ' ಎಂದು ಹೊರಗೆ ಅಡಿಯಿಟ್ಟೂ ರಣರಂಗದಲ್ಲಿ ಉತ್ತರಕುಮಾರನ ಪೌರುಷ ಅಡಗುವಂತೆ ಸೂರ್ಯನ ತಾಪಕ್ಕೆ ಬಳಲಿ ಬಿರುನಡೆಯಿಂ ಮತ್ತೆ ಮನೆಗೆ ಮರಳುವುದುಂಟು. ಬೇಗೆಯಿಂದಾಗಿಯೇ ಇದಕ್ಕೆ ಬೇಸಿಗೆ ಎಂದು ಹೆಸರಾಯ್ತೇನೋ ಎಂದು ನನಗೆ ಅನುಮಾನ.

            ಇನ್ನು ಎಷ್ಟು ನೀರು ಕುಡಿದರೂ ಇಂಗದ ದಾಹಕ್ಕೆ ಮಜ್ಜಿಗೆ, ಎಳನೀರು, ಪಾನಕ, ಜ್ಯೂಸು, ಕಲ್ಲಂಗಡಿ ಹಣ್ಣು, ಐಸ್ ಕ್ರೀಮುಗಳು ವಿರಹಕ್ಕೆ ಸಿಲುಕಿದ ಪ್ರಿಯಕರನಿಗೆ ಪ್ರಿಯತಮೆ ಸಿಕ್ಕಂತೆ ಅವುಗಳ ಸಖ್ಯ ಹಿತವಾಗಿರುತ್ತೆ. ಇನ್ನು ಬಟ್ಟೆಗಳ ವಿಷಯದಲ್ಲೂ ಬೇಸಿಗೆ ಬಂತೆಂದರೆ ಪ್ರಕೃತಿಗೆ ಹತ್ತಿರವಾದ ಹತ್ತಿಯುಡುಗೆಯೇ ಹಿತ. ಉಳಿದ ಕಾಲದಲ್ಲಿ ಹೇಗೆ ಬೇಕಾದರೂ ಫ್ಯಾಷನ್ ಮಾಡುವ ಹೆಂಗಳೆಯರು ಬೇಸಿಗೆಯಲ್ಲಿ ಹಳೆಯ ಕಾಲದವರಂತೆ ಹತ್ತಿಯ ಬಟ್ಟೆಯ ಮೊರೆ ಹೋಗಲೇಬೇಕು. ಕಾಲಾಯ ತಸ್ಮೈ ನಮಃ.

           ಭಾಳ ಸಿಟ್ಟು ಬಂದವರನ್ನು 'ಸೂರ್ಯನ ಥರ ಉರೀಬ್ಯಾಡಪ್ಪ' ಎನ್ನುವ ಮಾತು ಜನಜನಿತ. ಎಂದರೆ ಸೂರ್ಯನಿಗೆ ಸಿಟ್ಟುಬರುವ ಕಾಲ ಬೇಸಿಗೆ. ಅದಕ್ಕೇ ಯಾರಾದ್ರೂ ಸೂರ್ಯನನ್ನು ಬೈದರೆ ಬಿ.ಆರ್.ಲಕ್ಷ್ಮಣರಾವ್ ಅವರ 'ಏಕೆ ರವಿಗಿಂತ ತಾಪ? ಯಾರ ಮೇಲವನ ಕೋಪ? ಎಂದು ಹಳಿಯಬೇಡಿ, ಸೂರ್ಯನ ತಪ್ಪು ತಿಳಿಯಬೇಡಿ, ಮೋಡ ಕೂಡಿಸಲು, ಇಳೆಗೆ ಮಳೆ ತರಲು ದುಡಿಯುತಿಹನು, ಪಾಪ!' ಎಂಬ ಕವನವನ್ನು ಹೇಳಿ ಕೋಪಗೊಂಡವರನ್ನು ತುಸು ತಣ್ಣಗಾಗಿಸೋದು.

ಜಾಗತಿಕ ತಾಪಮಾನದ ಏರಿಕೆಯ ಪ್ರಭಾವದಿಂದಾಗಿ ಬೇಸಿಗೆ ಸಹ್ಯವಾಗುತ್ತಿಲ್ಲ. ಸೂರ್ಯ ನಿಗಿನಿಗಿ ಕೆಂಡವಾಗಿರುವಾಗ ತುಸುವಾದರೂ ತಣ್ಣಗಾಗಲಿ ಎಂದರೆ ತಿರುಗುವ ಫ್ಯಾನುಗಳೂ ಸೂರ್ಯನ ಪ್ರತಿನಿಧಿಗಳೇನೋ ಎಂಬಂತೆ ಬಿಸಿಗಾಳಿ ಬೀಸಿ ಮತ್ತೂ ಧಗೆಯನ್ನು ಹೆಚ್ಚಿಸುತ್ತವೆ. ಚಳಿಗಾಲದಲ್ಲಿ ಮುಚ್ಚಿಮುದುರಿ ಕುಳಿತ ಕಿಟಕಿಗಳು ಜೀವಬಂದವರಂತೆ ಬಾಯ್ತೆರೆದುಕೊಂಡು ಕುಳಿತುಕೊಳ್ಳುತ್ತವೆ. ಏರ್ ಕೂಲರ್‌ಗಳೋ, ಎ.ಸಿ.ಗಳೋ ಕರೆಂಟು ಇದ್ದರೆ ತಾನೇ ಕೆಲಸ ಮಾಡುವುದು? ಆದ್ರೆ ಈ ಕಾಲಕ್ಕೆ ಫ್ರಿಡ್ಜ್‌ ಮತ್ತು ಕೂಲರ್‌ಗಳಂಥ ಗೆಳೆಯರು ಬೇರಾರೂ ಇಲ್ಲವೇನೋ. ಇದೇ ಗೆಳೆಯರು ಚಳಿಗಾಲದಲ್ಲಿ ಶತ್ರುಗಳಂತೆ ಕಾಣುತ್ತಾರೆ. ಹಾಗೆ ಅನ್ನುವವರನ್ನು ಕಂಡು 'ಹೇ ಮನುಷ್ಯನೇ ನಿನ್ನ ಅನುಕೂಲಕ್ಕೆ ತಕ್ಕಂತೆ ಸಂಬಂಧಗಳನ್ನು ಬದಲಾಯಿಸುವೆಯಲ್ಲಾ' ಎಂದುಕೊಳ್ಳುತ್ತೇನೆ.

             ಥೂ ಏನು ಮಳೇನಪ್ಪಾ ಬಿಡೋದೇ ಇಲ್ಲ, ಒಂದು ಬಟ್ಟೆನೂ ಒಣಗೋಹಾಗಿಲ್ಲ, ಎಲ್ಲ ಚುಂಗು ವಾಸನೆಗಿಟ್ಟುಕೊಳ್ಳುತ್ತೆ. ಮನೆಯಿಂದ ಹೊರಗೆ ಹೋಗೋ ಹಾಗಿಲ್ಲ, ಕಾಲೆಲ್ಲ ಕೆಸರಾಗುತ್ತೆ ಅಂತ ಗೊಣಗಾಡುವ ನಮ್ಮನ್ನು ಚಳಿಗಾಲದಲ್ಲಿ ಯಪ್ಪಾ ಮೈ ಥರಗುಟ್ಟಿಸುವ ಕುಳಿಕುಳಿ ಗಾಳಿ, ಬಿಸಿ ಬಿಸಿ ಕಾಫಿ ಕುಡಿಯುತ್ತ ಬಜ್ಜಿ ಬೋಂಡಗಳನ್ನು ಇಳಿಸುತ್ತಾ ಬೆಚ್ಚಗೆ ಹೊದ್ದು ಮಲಗುವಾ ಎನಿಸಿ ಆಲಸಿಗಳನ್ನಾಗಿಸುವ ಕಾಲ. ಅವನ್ನೆಲ್ಲ ಮರೆಸುವ ಬೇಸಿಗೆಯ ಬಿಸಿಯನ್ನು ರವಿಯಂತೆಯೇ ಮುಖ ಮಾಡಿ ಸಿಣಿಗುಟ್ಟುವವರಿಗೇನೂ ಕಮ್ಮಿಯಿಲ್ಲ. ಅದಕ್ಕೇ ನಮ್ಮ ಮೈಸೂರು ಮಲ್ಲಿಗೆಯ ಕವಿ, 'ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು, ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು, ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಚಿಂತೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ' ಎಂದದ್ದು.

           ನಿತ್ಯಕ್ಕೊಮ್ಮೆ ಸ್ನಾನ ಮಾಡುವ ನಾವು ಬೇಸಿಗೆ ಬಂತೆಂದರೆ ಕೆಸರಿನಲ್ಲಿ ಎಮ್ಮೆ ಹೊರಳಿ ಸುಖಿಸುವ ಹಾಗೆ ಮತ್ತೆ ಮತ್ತೆ ಸ್ನಾನದ ಮೊರೆಹೋಗುತ್ತೇವೆ. ನನ್ನಂಥ ಕೆಲವರು ರಾತ್ರಿ ಮಲಗುವಾಗ ಒಂದು ತಂಬಿಗೆ ನೀರನ್ನು ಸೋರುವಂತೆ ಮೈಮೇಲೆ ಚಿಮುಕಿಸಿಕೊಂಡು ಸಣ್ಣಗೆ ಫ್ಯಾನ್ ಹಾಕಿದರೂ ಶಿಮ್ಲಾದಲ್ಲಿರುವಂತೆ ಸುಖಿಸುತ್ತೇವೆ. ಬೇಸಿಗೆಯಲ್ಲಿ ನನ್ನ ಮತ್ತೊಂದು ಸರ್ಕಸ್ ಎಂದರೆ ಕೆಲಸದಿಂದ ಬಂದ ಕೂಡಲೇ ನಾನು ಮಲಗುವ ಕೋಣೆಯ ಹೊರಗೋಡೆಗೆ ಬಕೆಟುಗಟ್ಟಲೇ ನೀರು ಸುರಿಯುವುದು. ಅದರಲ್ಲೂ ಪಶ್ಚಿಮದಿಕ್ಕಿನ ಗೋಡೆಗಂತೂ ಮೂರು ನಾಲ್ಕು ಬಾರಿ ಸ್ನಾನ. ಹಾಗೆ ಕಾದ ಗೋಡೆಗೆ ನೀರು ಹಾಕುವಾಗ ಅದು ಸಣ್ಣಗೆ ಕಿರ್ ಎಂದು ಕಿರಲುತ್ತದೆ. ಜೊತೆಗೊಂದು ಪರಿಮಳವೂ ಇರುತ್ತದೆ. ಅಂತೆಯೇ ಈ ಬೇಸಿಗೆಯಲ್ಲಿ ನಾವೂ ನೀರು ಕುಡಿಯಲೆಂದು ಬಾಟಲಿಗೆ ಬಾಯಿ ಹಾಕಿದರೆ ಅದೂ ಬುಸುಗುಡುವ ಹೆಂಡತಿಯಂತೆಯೇ ಬಿಸಿಯಾಗಿ ಕುಳಿತಿರುತ್ತದೆ. ಆಗೆಲ್ಲ ಮಣ್ಣಿನಮಡಕೆಯ ನೀರಿನ ರುಚಿಯೇ ರುಚಿ, ಅಜ್ಜಿಯ ಕೈಯಡುಗೆಯಂತೆ.

              ಬೇಸಿಗೆಯ ಆರಂಭಕ್ಕೆಲ್ಲ ಬರುವ ಹುಣಸೆಕಾಯಿ, ಮಾವಿನಕಾಯಿಯ ಕೆಲಸಕ್ಕೆ ಹೆಣ್ಣುಮಕ್ಕಳಿಗೆ ಎರಡು ಕೈ ಸಾಲದು. ಇಂದಿಗೂ ಅಂಥ ಸಂಪ್ರದಾಯ ಉಳಿಸಿಕೊಂಡ ಹೆಣ್ಣುಮಕ್ಕಳಿಗೆ ಈ ಮಾತಂದೆ ಬಿಡಿ. ಬಲಿಯದ ಹುಣಸೆಕಾಯನ್ನು ತೊಳೆದು ನೀರಾರಿಸಿ ಒಂದೆಳೆ ಬಿಸಿಲಿಗೆ ಹಾಕಿ ನಾರು ತೆಗೆದು ಚೂರುಮಾಡಿ ಹಸಿರುಮೆಣಸಿನಕಾಯಿ, ಉಪ್ಪು ಹಾಕಿ ಕಳಿತ ನಂತರ ಒರಳಿನಲ್ಲಿ ರುಬ್ಬಿ, ಸಾಸಿವೆ ಇಂಗಿನ ಪರಿಮಳದ ಒಗ್ಗರಣೆ ಕೊಟ್ಟ ಹುಣಸೆತೊಕ್ಕಿನ ರುಚಿಗೆ ಸೋಲದವರಿದ್ದಾರೆಂದರೆ ನನ್ನಾಣೆ ನಾ ನಂಬೆ. ಹಾಗೆಯೇ ಅದೇ ಹುಣಸೇಕಾಯಿಯನ್ನು, ಕಾದಾರಿದ ಉಪ್ಪುನೀರಿನೊಂದಿಗೆ ಒರಳಿನಲ್ಲಿ ತುಸು ತುಸುವೇ ಹಾರೆಯಿಂದ ಕುಟ್ಟಿ ಹಿಂಡಿ ರಸತೆಗೆದು ಅದಕ್ಕೆ ಒಣ ಬ್ಯಾಡಗಿ ಮೆಣಸಿನಕಾಯಿ ಹಸಿಸಾಸಿವೆ ರುಬ್ಬಿ ಹಾಕಿ ಕಲೆಸಿ ಇಂಗಿನೊಗ್ಗರಣೆ ಕೊಟ್ಟರೆ ಕೆಂಪನೆಯ ಹುಣಸೆ ರಸ ಸಿದ್ಧ. ಅಕ್ಕಿರೊಟ್ಟಿಗೂ ಸೈ, ದೋಸೆಗೂ ಸೈ, ಬಿಸಿಯನ್ನಕ್ಕೆ ಕಡಲೇಕಾಯಿಯೆಣ್ಣೆಯೊಂದಿಗೆ ಕಲೆಸಿ ಬಾರಿಸಲಿಕ್ಕೂ ಸೈ.

          ಊರೆಲ್ಲ ಬಿಸಿ ಬಿಸಿಲು ಎಂದು ಗೊಣಗಿದರೂ, ಬೇಸಿಗೆಯ ಬಿಸಿಲಿಗೆ ಕಾಯುವ ತಂಡವೊಂದಿರುತ್ತದೆ. ಇಡಿಯ ಮಾಡೆಲ್ಲ ಕಾದು ರೊಟ್ಟಿಯ ಹೆಂಚಾಗುವ ಕಾಲದಲ್ಲಿ ಹೆಣ್ಣುಮಕ್ಕಳ ಸಡಗರ ಗರಿಗೆದರುತ್ತದೆ. ವರ್ಷಕ್ಕೆಲ್ಲ ಸಾಕಾಗುವಷ್ಟು ಹಪ್ಪಳ, ಸಂಡಿಗೆ, ಬಾಳಕ, ಪೇಣಿಗಳ ತಯಾರಿ. ರಾತ್ರಿಯೆಲ್ಲ ಅಳೆದಿಟ್ಟು ಬೆಳಿಗ್ಗೆ ಗಂಡ ಮಕ್ಕಳು ಏಳುವ ಹೊತ್ತಿಗೆ ಅಕ್ಕಿಯ ಅಥವಾ ಸಬ್ಬಕ್ಕಿಯ ಗಂಜಿ ಹಪ್ಪಳಕ್ಕೆ ಗಂಜಿ ಕಾಯಿಸಿ ಹಳೆಯ ಹತ್ತಿ ಸೀರೆಯ ಮೇಲೆ ಸೌಟಿನಿಂದ ಸವರಿ, ಮಧ್ಯೆ ಮಧ್ಯೆ ಬೆವರು ಒರೆಸಿಕೊಳ್ಳುತ್ತ ಎಲ್ಲ ಗಂಜಿ ಬಿಡುವುದು ಒಂದು ಬಗೆ. ಅಕ್ಕಿ ಹಿಟ್ಟನ್ನು ಬಿಸಿನೀರಲ್ಲಿ ಉಕ್ಕರಿಸಿ ಉಂಡೆಮಾಡಿ ಒತ್ತಿ ಬಟ್ಟೆಯ ಮೇಲೋ ಪ್ಲಾಸ್ಟಿಕ್ ಹಾಳೆಯ ಮೇಲೋ ಇಟ್ಟು, ಇಟ್ಟಾದ ಮೇಲೆ ತಾ ಹೆತ್ತ ಮಕ್ಕಳನ್ನು ಹೆಮ್ಮೆಯಿಂದ ನೋಡುವ ತಾಯಿಯಂತೆ ಮತ್ತೊಮ್ಮೆ ನೋಡಿ ಮನೆಯ ಮೇಲಿನಿಂದ ಇಳಿದು ಬಂದು ಉಸ್ಸೆಂದು ಕೂರುವ ಹೆಣ್ಣುಮಕ್ಕಳು ಈಗ ಬೆರಳೆಣಿಕೆಯಷ್ಟೆ. 'ಅಷ್ಟ್ಯಾಕೆ ಕಷ್ಟ ಪಡಬೇಕು, ದುಡ್ಡು ಕೊಟ್ಟರೆ ಅಂಗಡೀಲಿ ಸಿಗೋದಿಲ್ವೇ' ಎನ್ನುವವರೇ ಹೆಚ್ಚು. ಆದರೂ ಬೇಸಿಗೆಯಲ್ಲಿ ಅವುಗಳನ್ನೆಲ್ಲ ಮಾಡುವ ಸಂಭ್ರಮ, ಸಡಗರ, ಅದನ್ನು ತಿಂದು ಮನೆಯವರು ಮೆಚ್ಚಿದಾಗ ಸಿಗುವ ಆನಂದ ಕೊಳ್ಳುವುದರಲ್ಲಿ ಸಿಕ್ಕೀತೇ?

             ಚಳಿಗಾಲದಲ್ಲಿ ಬೆಚ್ಚಗೆ ಹೊದ್ದು ಮಲಗುವ ಸೊಳ್ಳೆಗಳೂ, ಸಾಂಕ್ರಾಮಿಕ ರೋಗಗಳೂ ನೆಲದ ಕಾವಿಗೆ ಧಿಗ್ಗನೆದ್ದು ಹೊರಬಂದು ತಮ್ಮ ಅಟಾಟೋಪವನ್ನು ತೋರುತ್ತವೆ. 'ನಾವೇನು ಕಮ್ಮಿ' ಎಂದು ಔಷಧಗಳೂ, ವೈದ್ಯರೂ, ವೈದ್ಯರ 'ನರಸಿಂಗ್' ಹೋಮುಗಳೂ ಮೈಕೊಡವಿ ಎದ್ದು ಸಿದ್ಧವಾಗುತ್ತವೆ. ಇಂದಿನ ಕಾಯಿಲೆಗಳು ಹಿಂದಿನಂತಿಲ್ಲ. ಆಗೆಲ್ಲ ಇಂಥ ರೋಗದ ಲಕ್ಷಣ ಹೀಗೆಯೇ ಎಂದು ಹೇಳಬಹುದಾಗಿತ್ತು. ಈಗ ಮನುಷ್ಯರಂತೆಯೇ ರೋಗಗಳೂ ಬಣ್ಣ, ಗುಣ, ಲಕ್ಷಣ ಬದಲಾಯಿಸಿಕೊಂಡು ಆಟವಾಡಿಸುತ್ತವೆ.

            ನಾವೆಲ್ಲ ಚಿಕ್ಕವರಿದ್ದಾಗ ಬಿಸಿಲಿಗೆ ಹೋಗಿ ಆಡುತ್ತಿದ್ದರೆ 'ಬಿಸಿಲು ಬಾಳೆಹಣ್ಣು ತಿಂದ್ಯಾ' ಎಂದು ರೇಗಿಸುತ್ತಿದ್ದರು. ವಿಟಮಿನ್ 'ಡಿ'ಯಿಂದಾಗಿ ಸೂರ್ಯನ ಬಿಸಿಲು ಮೂಳೆಯನ್ನು ಗಟ್ಟಿಮಾಡುತ್ತಿದ್ದವು. ಸ್ಕಿನ್ ಟ್ಯಾನ್ ಆಗಿಬಿಡುತ್ತೆ, ಕಪ್ಪಗೆ ಕಾಣುತ್ತೇವೆ ಎಂದೆಲ್ಲ ಬಣ್ಣದ ಭ್ರಮೆಯಿಂದಾಗಿ ಸೂರ್ಯನ ಭೇಟಿಯನ್ನು ತಳ್ಳುತ್ತಾ ತಳ್ಳುತ್ತಾ, ಮೆಲ್ಲಗೆ ಬಿದ್ದರೂ ಫ್ರ್ಯಾಕ್ಚರ್ ಎಂದು ಮೂಲೆ ಸೇರುತ್ತಿದ್ದೇವೆ. ಬೇಸಿಗೆ ಬಂತೆಂದರೆ ಮಕ್ಕಳಿಗೆ ರಜೆಯ ಮಜಾ. ಹಿಂದೆಲ್ಲ ಅಜ್ಜ ಅಜ್ಜಿಯರ ಮನೆಗೋ ನೆಂಟರಿಷ್ಟರ ಮನೆಗೋ ಹೋಗಿ ರಜೆ ಕಳೆಯುವುದು ಬಾಂಧವ್ಯದ ವೃದ್ಧಿಗೆ ಸಹಾಯಕವಾಗುತ್ತಿತ್ತು. ಈಗೆಲ್ಲ ಕಂಪ್ಯೂಟರಿನದೋ ಮೊಬೈಲಿನದೋ ಸಂಬಂಧ ಬೆಳೆಸಿ ಒಂಟಿಬಾಳು ಬಾಳುವ ಹಾದಿಯಲ್ಲಿದ್ದೇವೆ.

           ಬೇಸಿಗೆ ಬಿಸಿಲಲಿ ಹೊಲ ಉಳುವ, ಕಲ್ಲು ಒಡೆವ, ಡಾಂಬರು ಹಾಕುವವರನ್ನು ಕಂಡಾಗ ಅವರೆಲ್ಲ ಯುದ್ಧಭೂಮಿಯ ಕಲಿಗಳೇನೋ ಎಂದು ಭಾಸವಾಗುತ್ತದೆ. ಹೊರಗಿನ ಬಿಸಿಲಿನಿಂದ ಗ್ರಾಹಕರು ಬ್ಯಾಂಕಿನೊಳಗೆ ಬಂದು ಸೂರ್ಯನ‌ ಮೇಲಿನ‌ ಕೋಪವನ್ನು ನಮ್ಮ ಮೇಲೆ ತೀರಿಸುವವರಂತೆ 'ನಿಮಗೇನ್ರೀ ಗೊತ್ತು ಬೇಗೆಯ ಬಗ್ಗೆ. ನೀವು ತಣ್ಣಗೆ ಫ್ಯಾನಿನ ಕೆಳಗೆ ಕೂತಿರ್ತೀರಿ' ಎಂದು‌ ಜೋರಾಗೇ ಗೊಣಗಿ ಕೂತವ್ರು ಅರ್ಧಗಂಟೆ ಕಳೆಯುವಷ್ಟರಲ್ಲಿ ಫ್ಯಾನ್ ಗಾಳಿಯ ಬೇಗೆಗೇ ಕೈಲಿ‌ ಹಿಡಿದ ಪೇಪರ್‌ಅನ್ನು ಪಂಕದಂತೆ ಬೀಸಿಕೊಳ್ಳುವುದ ಕಂಡಾಗ ನಗುವ ತಡೆಯದೇ ವಿಧಿಯಿಲ್ಲ.

ಬೇಸಿಗೆ ಬಂತೆಂದರೆ ಜಾತ್ರೆ, ಉತ್ಸವಗಳ ಸರತಿ ಸಾಲು ಕಂಗೊಳಿಸುತ್ತದೆ. ಅಂಥ ಜಾತ್ರೆಗಳನ್ನು ನೋಡುವುದೇ ಒಂದು ಸೊಗಸು. ಮೂರ್ನಾಲ್ಕು ದಶಕಗಳ ಹಿಂದೆ ಜಾತ್ರೆಯೆಂದರೆ ಹಿಂಡುಹಿಂಡಾಗಿ ಕುಟುಂಬದವರು, ಸ್ನೇಹಿತರು ಹೋಗಿ ಸಂಭ್ರಮಿಸುತ್ತಿದ್ದರು. ದೇವರ ರಥಕ್ಕೆ ಧವನ ಬಾಳೆಹಣ್ಣನ್ನು ಎಸೆದು ಕೃತಾರ್ಥರಾದವರಂತೆ ಅನುಭವಿಸುತ್ತಿದ್ದರು. ಮಕ್ಕಳೋ ಭಾರಿ ಜನಜಾತ್ರೆ ನೋಡಿ ಕಣ್ಕಣ್ಣುಬಿಟ್ಟು, ಬೆಂಡು ಬತ್ತಾಸು ಕಲ್ಯಾಣಸೇವೆಗಳ ಬಣ್ಣಗಳನ್ನು ನೋಡುತ್ತ ಅವುಗಳನ್ನು ಚೀಪುತ್ತ, ಬಲೂನುಗಳನ್ನು ಕೊಂಡು, ಅಲ್ಲಿಯ ತಿರುಗಣಿಯಲ್ಲಿ ಕುಳಿತು ಬೆದರಿ ಸಂತೋಷಿಸುತ್ತಿದ್ದ ಕಾಲ ನೆನಪಿನಂಗಳಕ್ಕಷ್ಟೇ ಮೀಸಲಾಗಿದೆ. ಇಂದಿನ ಮಕ್ಕಳಿಗೆ ಬೇಸಿಗೆಯ ರಜೆಯೂ ಒಂದೇ ಭಾನುವಾರವೂ ಒಂದೇ. ಮೊಬೈಲ್ ಒಂದಿದ್ದರೆ ಸಾಕು.

             ಈ ಬೇಸಿಗೆಯ ಹಬ್ಬಗಳ ಊಟ ತಿಂಡಿಗಳಿಗೂ ಪ್ರಕೃತಿಯ ಗುಣಸ್ವಭಾವಕ್ಕೂ ಒಂದು ನಂಟಿದೆ. ಚಳಿಗಾಲದ ದೀಪಾವಳಿ ಸಂಕ್ರಾಂತಿಗಳಲ್ಲಿ ಚರ್ಮ ಒಣಗುವುದರಿಂದ ಎಣ್ಣೆಯಂಶದ ಕಾಯೊಬ್ಬಟ್ಟು, ಎಳ್ಳು ಬೆಲ್ಲ ಕಡಲೆಬೀಜ ಗಳನ್ನು ಒಳಗೊಂಡ ಆಹಾರವಿರುತ್ತದೆ. ಅಂತೆಯೇ ಬೇಸಿಗೆಯ ಉಷ್ಣದಿಂದ ಕಾಪಾಡಿಕೊಳ್ಳಲು ಶ್ರೀರಾಮನವಮಿಯ ದಿನ ಹೆಸರುಬೇಳೆಯ ಕೋಸಂಬರಿ, ನಿಂಬೆಹಣ್ಣಿನ ಪಾನಕ, ನೀರುಮಜ್ಜಿಗೆಯನ್ನು ಸೇವಿಸುತ್ತೇವೆ. ಅಂತೆಯೇ ಯುಗಾದಿಯ ಅಡುಗೆ ಕೂಡ. ನಮ್ಮ ಹಿರಿಯರು ಸೇವಿಸುತ್ತಿದ್ದ ಆಹಾರವೇ ಔಷಧವಾಗಿತ್ತು. ಅಡುಗೆಮನೆಯೇ ಆರೋಗ್ಯಧಾಮವಾಗಿತ್ತು.

            ಬೇಸಿಗೆಯ ಮತ್ತೊಂದು ವಿಶೇಷವೆಂದರೆ ಮಾವಿನಕಾಯಿ ಮತ್ತು ಮಾವಿನ‌ಹಣ್ಣು. ರಾಜರುಗಳ ರಾಜ‌ ಹಣ್ಣಾಗುವ‌ ಮೊದಲೂ ಅವನ‌ ಖದರೇನು ಕಮ್ಮಿಯಿಲ್ಲ. ಹೆಣ್ಣು‌ ಮಕ್ಕಳಂತೂ ಮಾವಿನಕಾಯಿಯನ್ನು ಸಣ್ಣಹೋಳುಗಳಾಗಿ ಹೆಚ್ಚಿ ಉಪ್ಪಿನಲ್ಲಿ ಕಲಸಿ ಖಾರಸೇರಿಸಿ ಇಂಗಿನೊಗ್ಗರಣೆ ಕೊಟ್ಟು ಮಾಡುವ ಉಪ್ಪಿನಕಾಯಿ ವರ್ಷಕ್ಕೆಲ್ಲ ಊಟದ ನೆಚ್ಚಿನ‌ ಸಂಗಾತಿ. ಮಾವಿನ‌ ತೊಕ್ಕೂ ಹುಣಸೇ ತೊಕ್ಕಿನಷ್ಟೇ ಸೊಗಸು.

          ಈ‌ ಕಾಲದಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡದ ಹೆಣ್ಣುಮಕ್ಕಳ ಕೈಗಳು ಹಲಸಿನ‌ಹಪ್ಪಳ‌ ಮಾಡುವುದ ನೋಡಬೇಕು.
            ಸರಸರ ಆಡುತ್ತ ಹಪ್ಪಳ ಒತ್ತಿ, ಹರವಿದ‌ ಬಟ್ಟೆಯ ಮೇಲೆ ಟಪಟಪ ಎಸೆವುದನ್ನು ಕಂಡಾಗ ಹೈಸ್ಕೂಲಿನಲ್ಲಿ ನಾವಾಡುತ್ತಿದ್ದ ಡಿಸ್ಕ್ ಥ್ರೋ ನೆನಪಿಗೆ ಬಂದರೆ ಬೈಕೋಬೇಡಿ.. ಸಿಹಿಮಿಶ್ರಿತ ಹಪ್ಪಳ ಕೆಂಡದಲ್ಲಿ ಸುಟ್ಟರೂ ಸೈ ಎನ್ನುತ್ತದೆ, ಎಣ್ಣೆಯಲ್ಲಿ ಕರಿದರೂ‌ ಸೈ ಎನ್ನುತ್ತದೆ. ಬೇಸಿಗೆಯ ಬಿಸಿಲಲ್ಲಿ ತನ್ನ ಮೈ ಕುಗ್ಗಿಸಿಕೊಳ್ಳುವ ಹಪ್ಪಳ ಎಣ್ಣೆಯಲ್ಲಿ ಮೈಅರಳಿಸಿ ನಗುತ್ತದೆ, ಮಾನವ ಕಷ್ಟ ಸುಖಗಳಲ್ಲಿ ಒಗ್ಗುವಂತೆ. ಹಲಸಿನ‌ಹಪ್ಪಳದೊಟ್ಟಿಗೆ ತೆಂಗಿನತುರಿ ಮಸ್ತ್.

            ಬೇಸಿಗೆಯ ಬಿರುಬಿಸಿಲು ತಾಳದಾದಾಗ ಹಾದಿಯಲ್ಲಿ ಕಾಣುವ ವಿಶಾಲವಾದ ಹೆಸರು ನೇತುಹಾಕಿಕೊಂಡಿರದ ವೃಕ್ಷಗಳೂ ಮೊದಲ್ಗೊಂಡು, ತೆಂಗು, ಅರಳಿ, ಗಸಗಸೆಗಳೇ ಮೊದಲಾದ ಮರಗಳು ನಮಗೆ ನೆರಳಿನ ಆಶ್ರಯವಾಗುತ್ತವೆ. ಇನ್ನು ಹೊಂಗೆಯನ್ನು ಕಂಡಾಗಲೆಲ್ಲ ನಾ ಕಂಗಾಲಾಗುತ್ತೇನೆ. ತಾನು ಬಿಸಿಲಲಿ ನಿಂತು ಬಳಲಿದರೂ ತೋರಿಸಿಕೊಳ್ಳದೆ ಗಾಳಿಗೆ ನಗುನಗುತ್ತ ತಲೆಯಾಡಿಸಿ ತನ್ನ ಆಶ್ರಯಕ್ಕೆ ಬರುವವರಿಗೆ ತಂಪನೀವ ಅದರ ಉದಾರ ಗುಣ ನನ್ನೊಳಗೆ ಪ್ರಶ್ನೆ ಹುಟ್ಟುಹಾಕುತ್ತಲೇ ಇರುತ್ತದೆ. ಬೇಸಿಗೆಯಲ್ಲಿ ಬಿಸಿಲನ್ನು ದೂರುವುದ ಬಿಟ್ಟು ನಾವು ಯಾರಿಗೆ ಏನು ಉಪಯೋಗವಾಗುತ್ತಿದ್ದೇವೆ? ಇವುಗಳಿಂದಲಾದರೂ ನಾವೇನಾದರೂ ಕಲಿಯಬಹುದೇ? ಬೇಸಿಗೆಯ ಕಾಲ ಮುಗಿವ ಹೊತ್ತಿಗೆ ಸಾಕುಸಾಕಾಗಿ ಬಸವಳಿದ ನಮಗೆ ಕಪ್ಪುಕಟ್ಟಿದ ಮೋಡದಿಂದ ಕೆಲ ಹೊತ್ತಾದರೂ ಧೋ ಎಂದು ಮಳೆ ಸುರಿದರೆ ಜೀವ ಹಾಯ್ ಎನಿಸುತ್ತದೆ-ಊರಿಗೆ ಹೋದ ಸತಿ ಮರಳಿ ಮನೆಗೆ ಬಂದಂತೆ. ಬಿರುಬೇಸಿಗೆಯ ಕಾದ ರವರವ ನೆಲದ ಮೇಲೆ ನೀರೋ, ಮಳೆಯ ಹನಿಯೋ ಬಿದ್ದಾಕ್ಷಣ ಮೂಗು ಜೀವ ಹಾಯೆನಿಸುವ ಕಂಪನ್ನು ಸಂಭ್ರಮಿಸದಿರಲು ಸಾಧ್ಯವೇ?


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries