ಚಂಡೀಗಢ: ಪಂಜಾಬ್ ಹಿರಿಯ ಕಾಂಗ್ರೆಸ್ ಮುಖಂಡ ಸುನೀಲ್ ಜಾಖರ್ ಮತ್ತು ಗುಜರಾತಿನ ಯುವ ಮುಖಂಡ ಹಾರ್ದಿಕ್ ಪಾಟೀಲ್ ಪಕ್ಷ ತೊರೆದ ಬೆನ್ನಲ್ಲೇ ಮತ್ತೊಂದು ವಿಕೆಟ್ ಪತನವಾಗುವ ಸಾಧ್ಯತೆಯಿದೆ.
ಹರಿಯಾಣ ಪಂಜಾಬ್ ಘಟಕದಲ್ಲಿ ಸೂಕ್ತ ಸ್ಥಾನಮಾನ ಪಡೆಯುವಲ್ಲಿ ವಿಫಲರಾದ ನಂತರ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಕುಲದೀಪ್ ಬಿಷ್ಣೋಯ್ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿರುವುದು ಅವರ ಮುಂದಿನ ನಡೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ರಾಜ್ಯದ ರಾಜಕೀಯ ಕುರಿತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿರುವುದಾಗಿ
ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಪುತ್ರನಾಗಿರುವ 53 ವರ್ಷದ ಬಿಷ್ಣೋಯ್ ಹೇಳಿದ್ದಾರೆ. ಬುಧವಾರ ಸಂಜೆ ಗುರುಗ್ರಾಮದಲ್ಲಿ ಸಭೆ ನಡೆದಿರುವುದಾಗಿ ಕಾಂಗ್ರೆಸ್ ಮುಖಂಡರ ಆಪ್ತರೊಬ್ಬರು ತಿಳಿಸಿದ್ದಾರೆ.
ಹರಿಯಾಣ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಹೊಸ ಪದಾಧಿಕಾರಿಗಳ ನೇಮಕ ನಂತರ ತಮ್ಮ ಬೆಂಬಲಗರು ಆಕ್ರೋಶಗೊಂಡಿದ್ದು, ಅವರು ತಾಳ್ಮೆ ಕಳೆದುಕೊಳ್ಳದಂತೆ ಸಮಾಧಾನ ಪಡಿಸಿರುವುದಾಗಿ ಬಿಷ್ಣೋಯ್ ಕಳೆದ ತಿಂಗಳು ಹೇಳಿದ್ದರು. ಕಾಂಗ್ರೆಸ್ ಕಳೆದ ತಿಂಗಳು ಮಾಜಿ ಶಾಸಕ ಮತ್ತು ಭೂಪಿಂದರ್ ಸಿಂಗ್ ಹೂಡಾ ನಿಷ್ಠಾವಂತ ಉದಯ್ ಭಾನ್ ಅವರನ್ನು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಿತು, ಕುಮಾರಿ ಸೆಲ್ಜಾ ಅವರ ಬದಲಿಗೆ ನಾಲ್ಕು ಕಾರ್ಯಾಧ್ಯಕ್ಷರನ್ನು ನೇಮಿಸಿತು.