ಕಾಸರಗೋಡು: ವೇತನ ವಿತರಣೆಯಲ್ಲಿ ವಿಳಂಬವುಂಟಾಗುತ್ತಿರುವುದನ್ನು ಪ್ರತಿಭಟಿಸಿ ಕೆಎಸ್ಸಾರ್ಟಿಸಿಯ ವಿವಿಧ ಕಾರ್ಮಿಕ ಸಂಘಟನೆಗಳು ಆಹ್ವಾನ ನೀಡಿರುವ 24ತಾಸುಗಳ ಮುಷ್ಕರದಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಯಿತು. ಕಾಸರಗೋಡಿನಿಂದ ಮಂಗಳೂರು, ಸುಳ್ಯ, ಪುತ್ತೂರು, ಕಣ್ಣೂರು ಭಾಗಕ್ಕೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಹುತೇಕ ಬಸ್‍ಗಳೂ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಡಬೇಕಾಯಿತು. ಪ್ರಯಾಣಿಕರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳನ್ನು ಆಶ್ರಯಿಸಬೇಕಾಗಿ ಬಂದಿದ್ದು, ಕಾಸರಗೋಡು-ಮಂಗಳೂರು ಹೊರತುಪಡಿಸಿ ಉಳಿದ ರೂಟ್‍ಗಳಲ್ಲಿ ಬೆರಳೆಣಿಕೆ ಬಸ್‍ಗಳಿರುವುದರಿಂದ ಪ್ರಯಾಣಕ್ಕೆ ಸಮಸ್ಯೆಯುಂಟಾಗಿತ್ತು.
ಐಎನ್‍ಟಿಯುಸಿ, ಬಿಎಂಎಸ್, ಎಐಟಿಯುಸಿ ಯೂನಿಯನ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸಿಐಟಿಯು ಸಂಘಟನೆ ಮುಷ್ಕರದಲ್ಲಿ ಪಾಲ್ಗೊಂಡಿರಲಿಲ್ಲ. ಮುಷ್ಕರ ಹಿನ್ನೆಲೆಯಲಿಕೆಎಸ್ಸಾರ್ಟಿಸಿ ಡಯಸ್ ನಾನ್ ಘೋಷಿಸಿದ್ದರೂ, ಕಾರ್ಮಿಕ ಸಂಘಟನೆಗಳು ಮುಷ್ಕರದಿಂದ ಹಿಂದೆ ಸರಿದಿರಲಿಲ್ಲ. ಕೆಎಸ್ಸಾರ್ಟಿಸಿಯಲ್ಲಿ ವೇತನ ವಿಳಂಬವುಂಟಾಗುತ್ತಿರುವ ಬಗ್ಗೆ ಕಾರ್ಮಿಕ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ವೇತನ ವಿತರಿಸುವಂತೆ ಆಗ್ರಹಿಸಿ ಮುಷ್ಕರ ಹೂಡಲಾಗಿತ್ತು.