ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಹೆಚ್ಚಾಗುತ್ತಿರುವ ಒಮಿಕ್ರಾನ್ ರೂಪಾಂತರಿ ತಡೆ ನಿಟ್ಟಿನಲ್ಲಿ ಸೆಮಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಶಾಲೆಗಳು, ರೆಸ್ಟೋರೆಂಟ್ ಗಳು ಮತ್ತು ವ್ಯಾಪಾರ ವಹಿವಾಟು ಅಲ್ಲದೇ, ಅನೇಕ ಮೆಟ್ರೋ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ.
ಬೀಜಿಂಗ್ ನಲ್ಲಿ ಕಳೆದ 24 ಗಂಟೆಗಳಲ್ಲಿ 53 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 500ಕ್ಕೆ ಏರಿಕೆಯಾಗಿದ್ದು, ವೈರಸ್ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗಳ ಪುನರಾರಂಭವನ್ನು ಒಂದು ವಾರ ಮುಂದೂಡಲಾಗಿದೆ.
ಬುಧವಾರ ಸುಮಾರು 40 ಸಬ್ ವೇ ನಿಲ್ದಾಣಗಳು ಮತ್ತು 158 ಬಸ್ ಮಾರ್ಗಗಳನ್ನು ರದ್ದುಗೊಳಿಸಲಾಗಿತ್ತು. ಬೀಜಿಂಗ್ ನಲ್ಲಿನ ಎಲ್ಲಾ ಶಿಶುವಿಹಾರಗಳು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳ ಪುನಾರಾರಂಭವನ್ನು ಮೇ 11ರವರೆಗೂ ಮುಂದೂಡಲಾಗಿದೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ. ಬೀಜಿಂಗ್ ನಿಂದ ಬೇರೆಡೆ ತೆರಳುವವರಿಗೆ 48 ಗಂಟೆ ಮುಂಚಿನ ನ್ಯೂಕ್ಲಿಕ್ ಆಸಿಡ್ ಪರೀಕ್ಷೆಯ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಕಟ್ಟುನಿಟ್ಟಾದ ಪರಿಶೀಲನೆ ನಡೆಸಲಾಗುತ್ತಿದೆ. ರಸ್ತೆ ಮಾರ್ಗದಲ್ಲಿ ತೆರಳುವವರಿಗೆ ಸ್ಟಾಟ್ ಚೆಕ್ ಮಾಡಲಾಗುತ್ತಿದೆ. ಗ್ರೀನ್ ಹೆಲ್ತ್ ಕೋಡ್ ತೋರಿಸದವರಿಗೆ ಬೀಜಿಂಗ್ ನಿಂದ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಸ್ಪಷ್ಪಪಡಿಸಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.