ಮಂಜೇಶ್ವರ: : ರಮ್ಜಾನ್ ತಿಂಗಳ ಉಪವಾಸದ ಬಳಿಕ ಶವ್ವಾಲ್ ತಿಂಗಳ ಆರಂಭದ ದಿನ ಈದುಲ್ ಫಿತ್ರ್ ಹಬ್ಬವನ್ನು ಮಂಜೇಶ್ವರ ತಾಲೂಕಿನಾಧ್ಯಂತ ಸಂಭ್ರಮ, ಸಡಗರದಿಂದ ಮಂಗಳವಾರ ಆಚರಿಸಲಾಯಿತು.
ಕುಂಜತ್ತೂರು ಹಳೆಯ ಆರ್ ಟಿ ಒ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮಸ್ಜಿದ್ ನೂರ್ ಮಸೀದಿಯಲ್ಲಿ ಹನೀಸ್ ಮದನಿಯವರ ನೇತೃತ್ವದಲ್ಲಿ ಈದ್ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು.
ಪವಿತ್ರ ರಮ್ಜಾನ್ ತಿಂಗಳ 30 ಉಪವಾಸ ವ್ರತ, ದಾನ ಧರ್ಮಗಳನ್ನು ಮಾಡಿ, ಯಾವುದೇ ಕೆಡುಕಿಗೆ ಆಸ್ಪದ ನೀಡದ ಮುಸ್ಲಿಮರು, ಸಾಕಷ್ಟು ಒಳಿತಿನ, ಪುಣ್ಯದ ಕಾರ್ಯಗಳನ್ನು ಮಾಡಿದ್ದಾರೆ. ಅದರ ಸಂತೋಷದಲ್ಲಿ ಈದುಲ್ ಫಿತ್ರ್ ಆಚರಿಸುತ್ತಿದ್ದಾರೆ ಎಂದು ಹೇಳಿದ ಅವರು ಇಸ್ಲಾಂ ಧರ್ಮಕ್ಕೆ ಆರಂಭದಿಂದಲೇ ವಿರೋಧಿಗಳಿದ್ದರು ಈಗಲೂ ವಿರೋಧಿಗಳಿದ್ದಾರೆ. ಯಾವುದೇ ವಿರೋಧ ಬಂದರೂ ನಾವು ನಮ್ಮ ವಿಶ್ವಾಸವನ್ನು ಕೈ ಬಿಡಬಾರದು. ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಎಂದು ಹೇಳಿದರು.
ಮಾನಸಿಕ ಮಾಲಿನ್ಯದ ಶುದ್ಧಿಯ ಬಳಿಕ ದೈಹಿಕವಾಗಿ ಶುದ್ಧಿಗೊಂಡು, ಹೊಸ ಬಟ್ಟೆಗಳನ್ನು ಧರಿಸಿಕೊಂಡು, ಸುಗಂಧ ಹರಡಿ, ಲಘು ಸಿಹಿ ತಿಂಡಿ ಸೇವಿಸಿ, ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ, ಪ್ರವಚನದಲ್ಲಿ ಮುಸಲ್ಮಾನರು ಭಾಗಿಯಾದರು. ಕುಂಜತ್ತೂರು ಜುಮಾ ಮಸೀದಿಯಲ್ಲಿ ಮಸೀದಿ ಖತೀಬ್ ಹಾಶೀರ್ ಹಾಮಿದಿಯವರ ನೇತೃತ್ವದಲ್ಲಿ ಈದ್ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು. ಕುಂಜತ್ತೂರು ದಾರುಸ್ಸಲಾಂ ಸಲಫಿ ಜುಮಾ ಮಸೀದಿಯಲ್ಲಿ ಹರ್ಷಾದ್ ಸಲಫಿ ಯವರ ನೇತೃತ್ವದಲ್ಲಿ ಈದ್ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು. ಉದ್ಯಾವರ ಸಾವಿರ ಜಮಾಯತಿಯಲ್ಲಿ ಮಸೀದಿ ಖತೀಬ್ ಅಬ್ದುಲ್ ಕರೀಂ ಧಾರಿಮಿ ಯವರ ನೇತೃತ್ವದಲ್ಲಿ ಈದ್ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು. ಪೊಸೋಟ್ ಜುಮಾ ಮಸೀದಿಯಲ್ಲಿ ಶೆರೀಫ್ ಅಶ್ರಫಿ ಯವರ ನೇತೃತ್ವದಲ್ಲಿ ಈದ್ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು.
ಮಿಕ್ಕುಳಿದಂತೆ ಉಪ್ಪಳ, ಪೈವಳಿಕೆ, ಬಾಯಾರು, ಕುಂಬಳೆ, ನೀರ್ಚಾಲು, ಬದಿಯಡ್ಕ, ಪೆರ್ಲ, ಮುಳ್ಳೇರಿಯ ಮೊದಲಾದೆಡೆ ಈದುಲ್ ಪಿತುರ್ ಸಂಭ್ರಮದ ಆಚರಣೆ ನಡೆಯಿತು.