ಕಾಸರಗೋಡು: ಚೆರ್ವತ್ತೂರಿನ ಐಡಿಯಲ್ ಕೂಲ್‍ಬಾರ್‍ನಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಆರೋಗ್ಯ ಇಲಾಖೆ ಆಹಾರ ಉತ್ಪಾದನೆ ಮತ್ತು ಮಾರಾಟ ಮಳಿಗೆಗಳಲ್ಲಿ ಸುರಕ್ಷತೆ ಮತ್ತು ಶುಚಿತ್ವ ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಆಗ್ರಹಿಸಿದ್ದಾರೆ.
ಚೆರುವತ್ತೂರು.ವಿದ್ಯಾರ್ಥಿನಿ ಸಾವಿನ ಘಟನೆ ದುರಾದೃಷ್ಟಕರವಾಗಿದೆ. ಘಟನೆಗೆ ಕಾರಣರಾದ ಸಂಸ್ಥೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಳಸಿದ ಆಹಾರವನ್ನು ವಶಪಡಿಸಿಕೊಳ್ಳುವ ಸಂಸ್ಥೆಗಳಿಂದ ಒಂದಷ್ಟು ದಂಡ ಹೇರಿ, ಕೆಲವು ದಿನಗಳವರೆಗೆ ಮುಚ್ಚಿದ ನಂತರ ಮತ್ತೆ ತೆರೆಯುತ್ತಿವೆ. ಕೇವಲ ಕೆಲವು ದಾಳಿಗಳಿಂದ ಆಹಾರ ಭದ್ರತೆಯನ್ನು ಖಾತ್ರಿಪಡಿಸಲಾಗದು. ನಾಡಿನಾದ್ಯಂತ ಯಾವುದೇ ಮಾನದಂಡವಿಲ್ಲದೆ ತಲೆಯೆತ್ತುತ್ತಿರುವ ಫಾಸ್ಟ್ ಫುಡ್ ರೆಸ್ಟೊರೆಂಟ್‍ಗಳು, ಜ್ಯೂಸ್ ಮತ್ತು ಐಸ್ ಕ್ರೀಂ ಪಾರ್ಲರ್ ಗಳ ಗುಣಮಟ್ಟವನ್ನು ಖಾತ್ರಿಪಡಿಸಲು ನಿಖರವಾದ ಮತ್ತು ದಕ್ಷ ವ್ಯವಸ್ಥೆಯಿಲ್ಲದಿರುವುದು ಸಮಸ್ಯೆಯಾಗಿದೆ. ಅಡುಗೆಮನೆಗಳ ಸ್ವಚ್ಛತೆ ಅಲ್ಲದೆ ಅಡುಗೆ ಕಾರ್ಮಿಕರ ನೈರ್ಮಲ್ಯ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸಂಸ್ಥೆ ಮಾಲೀಕರು ಕಾಳಜಿ ವಹಿಸಬೇಕು. ಬೇಕರಿ ಸಂಸ್ಥೆಗಳಲ್ಲಿ ಕಳಪೆ ಹಾಗೂ ಹಳಸಿದ ತರಕಾರಿ, ಹಣ್ಣು, ಮಾಂಸವನ್ನು ಬಳಸದಂತೆ ಅಧಿಕಾರಿಗಳು ಹಾಗೂ ಸಂಸ್ಥೆಗಳ ಮಾಲೀಕರು ನಿಗಾವಹಿಸುವಂತೆಯೂ ಅವರು ಆಗ್ರಹಿಸಿದ್ದಾರೆ.