ನವದೆಹಲಿ: ಬಹಿರಂಗವಾಗೇ ಕಾಂಗ್ರೆಸ್ ವಿರುದ್ಧ ಗುಡುಗುತ್ತಿದ್ದ ಗುಜರಾತ್ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಮಂಗಳವಾರ ಗುಜರಾತ್ ನಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಈ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯವರ ತವರು ನಾಡಲ್ಲಿ ದೊಡ್ಡ ಬಿರುಕುಗಳೊಂದಿಗೆ ಹೋರಾಡುತ್ತಿದೆ. ಇಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹಾರ್ದಿಕ್ ಪಟೇಲ್ ಅವರನ್ನ ಉಲ್ಲೇಖಿಸದಿದ್ದರೂ, ಅವರು ಹಾರ್ದಿಕ್ ಪಟೇಲ್ ಅವರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಗುಜರಾತ್‌ನಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ಇತ್ತೀಚೆಗೆ ತಮ್ಮ ಟ್ವಿಟರ್ ಅಕೌಂಟ್ ಬಯೋದಿಂದ ಕಾಂಗ್ರೆಸ್ ಮತ್ತು ಪಕ್ಷದ ಚಿಹ್ನೆಯನ್ನು ಕೈಬಿಟ್ಟು ಹಂತಹಂತವಾಗಿ ತಮ್ಮ ಸಿಟ್ಟನ್ನು ಹೊರಹಾಕ್ತಿದ್ದಾರೆ. ಅವರು ಆಡಳಿತಾರೂಢ ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ತಮ್ಮ ನಡೆಯಿಂದ ಪುಷ್ಟಿ ನೀಡ್ತಿದ್ದಾರೆ.
2019 ರಲ್ಲಿ ಕಾಂಗ್ರೆಸ್‌ಗೆ ಸೇರಿದ ಹಾರ್ದಿಕ್ ಪಟೇಲ್, ಗುಜರಾತ್‌ನಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗ್ತಿದೆ ಎಂದು ಪದೇ ಪದೇ ಬಹಿರಂಗವಾಗೇ ಸಿಡಿದೇಳ್ತಿದ್ದಾರೆ. ಗುಜರಾತ್ ನಲ್ಲಿ ತಮ್ಮ ಸ್ಥಿತಿಯನ್ನ ಬಲವಂತವಾಗಿ ಸಂತಾನಹರಣ ಮಾಡಿದ ವರನಂತಾಗಿದೆ ಎಂದು ಹೋಲಿಸಿಕೊಂಡಿದ್ದರು.
ರಾಹುಲ್ ಗಾಂಧಿ ಅವರು ಹಾರ್ದಿಕ್ ಪಟೇಲ್ ಅವರನ್ನ ಭೇಟಿ ಮಾಡಿ ಪಕ್ಷದಲ್ಲಿ ಮುಂದುವರಿಯುವಂತೆ ಒತ್ತಾಯಿಸಿ ಸಂದೇಶ ತಲುಪಿಸಿದ್ದಾರೆ ಎಂದು ವರಯಾಗಿದೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಹಾರ್ದಿಕ್ ಪಟೇಲ್ ಅವರನ್ನು ಸಂಪರ್ಕಿಸುವಂತೆ ಗುಜರಾತ್‌ನ ಪಕ್ಷದ ಉಸ್ತುವಾರಿ ಮತ್ತು ಇತರ ನಾಯಕರನ್ನು ರಾಹುಲ್ ಕೇಳಿಕೊಂಡಿದ್ದಾರೆ.
ಗುಜರಾತ್ ಕಾಂಗ್ರೆಸ್ ನಾಯಕತ್ವದೊಂದಿಗಿನ ಹಾರ್ದಿಕ್ ಪಟೇಲ್ ಅವರ ಅಸಮಾಧಾನವು ಪ್ರತಿಸ್ಪರ್ಧಿ ಬಿಜೆಪಿಯನ್ನು ಹೊಗಳುವುದರೊಂದಿಗೆ ತೀವ್ರವಾಗಿ ವ್ಯತಿರಿಕ್ತವಾಗಿದೆ. ಈ ಊಹಾಪೋಹಗಳನ್ನು ತಳ್ಳಿಹಾಕಿದ ಹಾರ್ದಿಕ್ ಪಟೇಲ್ ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನಗೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಬಗ್ಗೆ ಅಸಮಾಧಾನವಿಲ್ಲ, ನನಗೆ ರಾಜ್ಯ ನಾಯಕತ್ವದ ಬಗ್ಗೆ ಅಸಮಾಧಾನವಿದೆ. ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಬಲಿಷ್ಠ ವ್ಯಕ್ತಿಗಳಿಗೆ ಸ್ಥಾನಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದರು.