ಕೋಲ್ಕತ್ತಾ: ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಪಿ. ಚಿದಂಬರಂ ಅವರು ಇಂದು ಕಲ್ಕತ್ತಾ ಹೈಕೋರ್ಟ್‌ನಿಂದ ವಕೀಲರಾಗಿ ಹೊರಬರುವಾಗ ಅವರ ಪಕ್ಷದ ಸಹೋದ್ಯೋಗಿಗಳಿಂದಲೇ ಪ್ರತಿಭಟನೆ ಎದುರಿಸಿದ್ದಾರೆ.
ಕೃಷಿ ಸಂಸ್ಕರಣಾ ಸಂಸ್ಥೆ ಕೆವೆಂಟರ್ ಅನ್ನು ಪ್ರತಿನಿಧಿಸಿ ಕೋರ್ಟ್ ನಲ್ಲಿ ವಕೀಲಿಕೆ ಮುಗಿಸಿ ಹೊರಬರುವಾಗ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ತೃಣಮೂಲ ಕಾಂಗ್ರೆಸ್ ಸರ್ಕಾರದ ಮೆಟ್ರೋ ಡೈರಿ ಷೇರುಗಳನ್ನು ಖಾಸಗಿ ಕಂಪನಿಗೆ ಮಾರಾಟ ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ಚೌಧರಿ ಪ್ರಕರಣ ದಾಖಲಿಸಿದ್ದರು.
ಆದರೆ ಪಿ. ಚಿದಂಬರಂ ಅವರು ಮಮತಾ ಬ್ಯಾನರ್ಜಿ ಸರ್ಕಾರದ ಪರ ನಿಂತು ವಾದ ಮಾಡಿದ್ರು. ಹೀಗಾಗಿ ಕಾಂಗ್ರೆಸ್‌ಗೆ ನಿಷ್ಠೆಯನ್ನು ಪ್ರತಿಪಾದಿಸಿದ ಕಾಂಗ್ರೆಸ್ ಸೆಲ್‌ಗೆ ಸೇರಿದ್ದ ವಕೀಲರ ಗುಂಪು ಪಿ. ಚಿದಂಬರಂ ಅವರು ಕಾಂಗ್ರೆಸ್ ಪಕ್ಷದ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟಿಸಿದರು.
ಕಪ್ಪು ವಸ್ತ್ರ ಮತ್ತು ಧ್ವಜಗಳನ್ನು ತೋರಿಸಿ ಅವರನ್ನು ದಲಾಲ್ ಎಂದು ಕರೆದರು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ಕಾಂಗ್ರೆಸ್‌ನ ಕಳಪೆ ಸ್ಥಿತಿಗೆ ಕೇಂದ್ರದ ಮಾಜಿ ಸಚಿವರನ್ನು ದೂಷಿಸಿದರು.
ಆಂದೋಲನಕಾರರಲ್ಲಿ ಒಬ್ಬರಾದ ವಕೀಲ ಕೌಸ್ತವ್ ಬಾಗ್ಚಿ, ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರಿಂದ ಷೇರುಗಳ ಖರೀದಿಯನ್ನು ಆಕ್ಷೇಪಿಸುತ್ತಿರುವ ಘಟಕದ ಪರವಾಗಿ ಹಾಜರಾಗಿದ್ದಕ್ಕಾಗಿ ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡರು. ಚಿದಂಬರಂ ಅವರು ಸಿಡಬ್ಲ್ಯೂಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಸದಸ್ಯರಾಗಿದ್ದಾರೆ ಮತ್ತು ಪ್ರಮುಖ ನಾಯಕರಾಗಿದ್ದಾರೆ ಎಂದು ಬಾಗ್ಚಿ ಹೇಳಿದರು.