ಶ್ರೀನಗರ: ಕಣಿವೆ ಪ್ರದೇಶದಲ್ಲಿ ಉಗ್ರರಿಂದ ಅಮಾಯಕರ ಸಾವಿಗೆ 24 ಗಂಟೆಯೊಳಗೆ ಕಠಿಣ ಪರಿಹಾರವನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾದಲ್ಲಿ ಸಾಮೂಹಿಕವಾಗಿ ವಲಸೆ ಹೋಗುವುದಾಗಿ ಕಾಶ್ಮೀರಿ ಪಂಡಿತರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಕುಲ್ಗಾಂನ ಗೋಪಾಲ್ ಪೊರಾ ಹೈಸ್ಕೂಲ್ ನಲ್ಲಿ ಇಂದು ಬೆಳಗ್ಗೆ ಜಮ್ಮು ವಿಭಾಗದ ಶಿಕ್ಷಕರೊಬ್ಬರು ಉಗ್ರರಿಂದ ಗುಂಡಿಗೆ ಬಲಿಯಾದ ನಂತರ ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿದ ಪಂಡಿತರು ಈ ಘೋಷಣೆ ಮಾಡಿದ್ದಾರೆ.
24 ಗಂಟೆಯೊಳಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ಸಾಮೂಹಿಕವಾಗಿ ಕಣಿವೆ ಪ್ರದೇಶ ತೊರೆಯುತ್ತೇವೆ, ಮತ್ತೊಮ್ಮೆ ಸಾಮೂಹಿಕವಾಗಿ ವಲಸೆ ಹೋಗುವುದಾಗಿ ಪ್ರತಿಭಟನಾಕಾರ ಅಮಿತ್ ಕೌಲ್ ಹೇಳಿದರು.
ನಮ್ಮ ನಿಯೋಗ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾದಾಗ, ನಮ್ಮನ್ನು ರಕ್ಷಿಸಿ, ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ಬರುವವರಿಗೆ 2-3 ವರ್ಷ ಬೇರಡೆಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು. 2-3 ವರ್ಷಗಳಲ್ಲಿ ಕಾಶ್ಮೀರವನ್ನು ಭಯೋತ್ಪಾದನೆ ಮುಕ್ತ ಮಾಡುವುದಾಗಿ ಭರವಸೆ ನೀಡಿರುವುದಾಗಿ ಐಜಿಪಿ ವಿಜಯ್ ಕುಮಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.
ಪರಿಹಾರ ಶಿಬಿರಗಳಲ್ಲಿ ಕೇವಲ 1,250 ಜನರಿಗೆ ಮಾತ್ರ ವಸತಿ ಕಲ್ಪಿಸಲಾಗಿದೆ. ಉಳಿದ 4,000 ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸೂಕ್ತ ಪರಿಹಾರ ಒದಗಿಸುವವರೆಗೂ 24 ಗಂಟೆಗಳ ಕಾಲವೂ ಪ್ರತಿಭಟನೆ ಮುಂದುವರೆಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.