ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಶಿವಲಿಂಗವು ಮೊಗೇರ ಸಮುದಾಯದ ಮದರು ಮಾತೆಗೆ ಒಲಿದಿರುವುದಾಗಿದೆ. ಉಳಿಯತ್ತಡ್ಕಲ್ಲಿ ನಡೆದ ಮೊಗೇರ ಮಹಾ ಸಂಗಮದ ಠರಾವಿನಲ್ಲಿ ಮೊಗೇರ ಸರ್ವಿಸ್ ಸೊಸೈಟಿಯ ನೇತೃತ್ವದಲ್ಲಿ ಮಧೂರಿನಲ್ಲಿ ಆಳೆತ್ತರದ ಮದರುವಿನ ವಿಗ್ರಹವನ್ನು ಸ್ಥಾಪಿಸುವ ಮಹತ್ತರ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಮೊಗೇರ ಮಹಾಸಂಗಮ 2022ರ ಕಾರ್ಯಕ್ರಮವನ್ನು ಕರ್ನಾಟಕ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಎಸ್ ಅಂಗಾರ ಸುಳ್ಯ ಇಚರು ಮೊಗೇರ ಸರ್ವಿಸ್ ಸೊಸೈಟಿಯ ರಾಜ್ಯ ಅಧ್ಯಕ್ಷ ಐ ಲಕ್ಷಣ ಪರಿಯಡ್ಕ ಇವ ಅಧ್ಯಕ್ಷತೆಯಲ್ಲಿ ದೀಪಬೆಳಗಿಸಿ ಉದ್ಘಾಟಿಸಿ ಮೊಗೇರ ಸಮಾಜಕ್ಕೆ ಹುರುಪು ಹುಟ್ಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಇವರಿಗೆ ವಿವಿಧ ಬೇಡಿಕೆ ಪತ್ರಗಳನ್ನು ನೀಡಲಾಯಿತು. ಶಾಸಕರಿಬ್ಬರೂ ಮೊಗೇರ ಮಹಾ ಸಂಗಮದ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಲು ಪೂರ್ಣಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಮೊಗೇರ ಸರ್ವೀಸ್ ಸೊಸೈಟಿಯು ಕಳೆದ 18 ವರ್ಷಗಳಿಂದ ಮಧೂರಿನಲ್ಲಿ ಮದರು ಮಾತೆಗೆ ವಿಗ್ರಹ ಸ್ಥಾಪಿಸಿ ಶಾಶ್ವತ ಗೌರವ ನೀಡಬೇಕೆಂದು ದೇವಸ್ವಂ ಬೋರ್ಡು, ಕೇರಳ ಸರ್ಕಾರ ಹಾಗೂ ಮಧೂರು ಕ್ಷೇತ್ರ ಸಮಿತಿಗೆ ಲಿಖಿತ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಮಧೂರಿನಲ್ಲಿ ಕಳೆದ ಶ್ರೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಸಭೆಯಲ್ಲಿ ಮೊಗೇರ ಸರ್ವೀಸ್ ಸೊಸೈಟಿಯ ನೇತಾರರು ಕೊಂಡೆವೂರು ನಿತ್ಯಾನಂದಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯರ ಸಾನ್ನಿಧ್ಯದಲ್ಲಿ ಈ ಬೇಡಿಕೆಯನ್ನು ಈಡೇರಿಸಲು ಲಿಖಿತ ಮನವಿ ಸಲ್ಲಿಸಿದಾಗ ಈ ಕಾರ್ಯಕ್ಕೆ ಶ್ರೀ ಸ್ವಾಮೀಜಿಯರು ಸ್ಪಂದಿಸಿ ಜೀರ್ಣೋದ್ಧಾರ ಸಮಿತಿಯವರಲ್ಲಿ ಮೊಗೇರ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿಕೊಡಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿನಂತಿಸಿದ್ದರು.
ಮೊಗೇರ ಮಹಾಸಂಗಮ 2022ರ ಕಾರ್ಯಕ್ರಮದಲ್ಲಿ ಮೊಗೇರ ಸರ್ವೀಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಸ್ವಾಮಿಕೃಪಾ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಆದರ್ಶ ಪಟ್ಟತ್ತಿಮೊಗೇರ್ ವಂದಿಸಿದರು.