ನವದೆಹಲಿ: ಸುಪ್ರೀಂ ಕೋರ್ಟ್‌ನಿಂದ ವಾಗ್ದಂಡನೆಗೆ ಒಳಗಾಗಿರುವ ದೆಹಲಿ ಪೊಲೀಸರು ದೆಹಲಿ 'ಧರ್ಮ ಸಂಸದ್' ಗೆ ಸಂಬಂಧಿಸಿದಂತೆ ದ್ವೇಷ ಭಾಷಣ ಪ್ರಕರಣದಲ್ಲಿ ಮತ್ತೊಮ್ಮೆ ಹೊಸದಾಗಿ ಅಫಿಡವಿಟ್ ಅನ್ನು ಶನಿವಾರ ಸಲ್ಲಿಸಿದ್ದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಹಿಂದೂ ಯುವ ವಾಹಿನಿ ಆಯೋಜಿಸಿದ್ದ ಧರ್ಮ ಸಂಸದ್ ಕಾರ್ಯಕ್ರಮವೊಂದರಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಕರೆ ನೀಡಿದ ಭಾಷಣವು 'ದ್ವೇಷ ಭಾಷಣವಲ್ಲ' ಎಂದು ದೆಹಲಿ ಪೊಲೀಸರು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಸಮಾರಂಭದಲ್ಲಿ ಸುದರ್ಶನ ಸುದ್ದಿ ಟಿವಿ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಅವರು ಪ್ರಮಾಣ ವಚನ ಸ್ವೀಕರಿಸಲು ಜನರನ್ನು ಹೀಗೆ ಒತ್ತಾಯಿಸಿದ್ದರು. ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡುತ್ತೇವೆ. ಹಿಂದೂ ರಾಷ್ಟ್ರಕ್ಕಾಗಿ ನಾವು ಹೋರಾಡುತ್ತೇವೆ. ಅದಕ್ಕಾಗಿ ಸಾಯಲೂ ಸಿದ್ಧ. ಅಗತ್ಯವಿದ್ದರೆ ಕೊಲ್ಲಲೂ ಸಿದ್ಧ ಎಂದು ಭಾಷಣ ಮಾಡಿದ್ದರು.
ಈ ಕಾರ್ಯಕ್ರಮವನ್ನು ಕಳೆದ ವರ್ಷ ಡಿಸೆಂಬರ್ 19 ರಂದು ಬಲಪಂಥೀಯ ಗುಂಪು ಹಿಂದೂ ಯುವ ವಾಹಿನಿ ಆಯೋಜಿಸಿತ್ತು.
ಇದೀಗ ಹೊಸ ಅಫಿಡವಿಟ್‌ನಲ್ಲಿ ಎಲ್ಲಾ ಸಾಕ್ಷಿಗಳನ್ನು ಪರಿಶೀಲಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ದೂರುಗಳಲ್ಲಿನ ಎಲ್ಲಾ ಲಿಂಕ್‌ಗಳು ಮತ್ತು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಇತರ ವಸ್ತುಗಳನ್ನು ವಿಶ್ಲೇಷಿಸಲಾಗಿದೆ ಮತ್ತು ಯೂಟ್ಯೂಬ್‌ನಲ್ಲಿ ಭಾಷಣದ ವೀಡಿಯೊ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷಿ ಪರಿಶೀಲನೆಯ ನಂತರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A, 295A, 298 ಮತ್ತು 34 ರ ಅಡಿಯಲ್ಲಿ ಅಪರಾಧಗಳಿಗಾಗಿ ಓಖ್ಲಾ ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆಯಲ್ಲಿ ಮೇ 4 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದಿದೆ.
ಹಿಂದಿನ ಅಫಿಡವಿಟ್‌ನಲ್ಲಿ ಇದು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷದ ಭಾಷಣವಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದರು. ಮುಸ್ಲಿಮರ ಹತ್ಯಾಕಾಂಡದ ಬಹಿರಂಗ ಕರೆ ಎಂದು ಅರ್ಥೈಸಬಹುದಾದ ಇಂತಹ ಪದಗಳ ಬಳಕೆ ಇಲ್ಲ ಎಂದು ಪೊಲೀಸರು ಹೇಳಿದ್ದರು.
ಆದರೆ ಏಪ್ರಿಲ್ 22 ರಂದು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿ ಮತ್ತೊಂದು ಹೊಸ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿತ್ತು.
ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಧರ್ಮ ಸಂಸದ್ (ಧಾರ್ಮಿಕ ಕೂಟ)ಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ದ್ವೇಷ ಭಾಷಣಗಳ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಮಾಜಿ ಹೈಕೋರ್ಟ್ ನ್ಯಾಯಾಧೀಶೆ ಮತ್ತು ಹಿರಿಯ ವಕೀಲ ಅಂಜನಾ ಪ್ರಕಾಶ್ ಮತ್ತು ಪತ್ರಕರ್ತೆ ಕುರ್ಬಾನ್ ಅಲಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.