ಲಂಡನ್: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಭಾರತದ ಕೊನೆಯ ವೈಸ್ರೀನ್ (ವೈಸ್ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರ ಪತ್ನಿ) ಎಡ್ವಿನಾ ಮೌಂಟ್‌ಬ್ಯಾಟನ್ ಅವರ ನಡುವಿನ ಪ್ರೀತಿಯ ವಿಷಯ ಮತ್ತೆ ಸದ್ದು ಮಾಡಿದೆ.
ಇವರಿಬ್ಬರೂ ಪರಸ್ವರ ಪ್ರೀತಿಸುತ್ತಿದ್ದರು ಆದರೆ, ಇಬ್ಬರ ಮಧ್ಯೆ ಯಾವುದೇ ದೈಹಿಕ ಸಂಬಂಧವಿರಲಿಲ್ಲ ಎಂದು ಮೌಂಟ್‌ಬ್ಯಾಟನ್ ಪುತ್ರಿ ಪಮೇಲಾ ಹಿಕ್ಸ್ ನೀ ಹೇಳಿಕೆ ನೀಡಿದ್ದರು.
ಈ ಲವ್ ಸ್ಟೋರಿ ಇದೀಗ ಮತ್ತೆ ಸದ್ದು ಮಾಡಲು ಕಾರಣ, ಖ್ಯಾತ ಬ್ರಿಟಿಷ್ ಇತಿಹಾಸಕಾರ ಆಂಡ್ರ್ಯೂ ಲೋನಿ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ. ಬ್ರಿಟನ್ನ ಪ್ರಥಮ ದರ್ಜೆ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದ ಆಂಡ್ರ್ಯೂ ಲೋನಿ, 1930ರ ದಶಕದ ಹಿಂದಿನ ಡೈರಿಗಳು ಮತ್ತು ಪತ್ರ ವ್ಯವಹಾರಗಳಲ್ಲಿನ ಕೆಲವು ಅಂಶಗಳನ್ನು ಬಹಿರಂಗಪಡಿಸಬೇಕೆಂದು ಕೋರ್ಟ್ ಅನ್ನು ಕೋರಿದ್ದರು.
ಈ ಇಬ್ಬರ ಕುರಿತು ಮಾಹಿತಿ ಬಯಸಿದ್ದ ಅವರು, ಮೊದಲು ಮಾಹಿತಿ ಆಯುಕ್ತರ ಕಚೇರಿಯನ್ನು ಕೋರಿದ್ದರು. ಆದರೆ ಅವರ ಮನವಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಆಂಡ್ರ್ಯೂ ಲೋನಿ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ ಕೋರ್ಟ್ನಲ್ಲಿ ಕೂಡ ಆಂಡ್ರ್ಯೂ ಲೋನಿಗೆ ಹಿನ್ನಡೆಯಾಗಿದೆ. ಮಾಹಿತಿ ಬಹಿರಂಗದ ಕುರಿತು ಆದೇಶಿಸಲು ಕೋರ್ಟ್ ನಿರಾಕರಿಸಿದೆ.
ಈ ದಾಖಲೆಗಳನ್ನು ಲಂಡನ್ನ ಸೌತಂಪ್ಟನ್ ವಿಶ್ವವಿದ್ಯಾಲಯವು 2011ರಲ್ಲಿ ಕೋಟಿ ರೂಪಾಯಿಗಳಿಗೆ ಮೌಂಟ್‌ಬ್ಯಾಟನ್ ಕುಟುಂಬದಿಂದ ಸಂಗ್ರಹಿಸಿದೆ. ಸುಮಾರು 27 ಕೋಟಿ ರೂಪಾಯಿಗಳಿಗೆ ಈ ದಾಖಲೆ ಪಡೆದುಕೊಂಡಿದೆ. ಇದನ್ನು ಬಹಿರಂಗಪಡಿಸಲು ಆದೇಶಿಸಬೇಕು ಎಂದು ಆಂಡ್ರ್ಯೂ ಕೋರಿಕೊಂಡಿದ್ದರು. ನಾಲ್ಕು ವರ್ಷಗಳಲ್ಲಿ ಕಾನೂನು ಹೋರಾಟಕ್ಕಾಗಿ 2.88 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಸೌತಾಂಪ್ಟನ್ ವಿಶ್ವವಿದ್ಯಾಲಯವು ಈ ಪತ್ರಗಳ ಗೌಪ್ಯತೆ ಮೇಲೆ ಅಧಿಕಾರ ಹೊಂದಿಲ್ಲ. ಬ್ರಾಡ್ಲ್ಯಾಂಡ್ ಆರ್ಕೈವ್ ಮೂಲಕ ಪತ್ರಗಳು ಮತ್ತು ಡೈರಿಗಳನ್ನು ಭೌತಿಕವಾಗಿ ರಕ್ಷಣೆ ಮಾಡಲಾಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.