ಕೀವ್: ಪ್ರೀತಿಸಿ ಚಿಕ್ಕಪುಟ್ಟ ಕಾರಣಕ್ಕೆ ಕೈಕೊಟ್ಟು ಓಡಿಹೋಗುವ ಹಲವಾರು ಸುದ್ದಿಗಳನ್ನು ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಇವುಗಳ ನಡುವೆ ಇಲ್ಲೊಬ್ಬ ಪ್ರಿಯತಮ ಸ್ಫೋಟವೊಂದರಲ್ಲಿ ಎರಡೂ ಕಾಲುಗಳನ್ನು ಕಳೆದುಕೊಳ್ಳುವುದು ಮಾತ್ರವಲ್ಲದೇ ಸ್ಫೋಟದ ಭೀಕರತೆಗೆ ಕೈಗಳ ಹಲವಾರು ಬೆರಳುಗಳನ್ನೂ ಕಳೆದುಕೊಂಡ ತನ್ನ ಪ್ರೇಮಿಯನ್ನ ಮದುವೆಯಾಗಿರುವ ಮನಕಲುಕುವ ಘಟನೆ ಯೂಕ್ರೇನ್‌ನಲ್ಲಿ ನಡೆದಿದೆ.
ತಿಂಗಳುಗಳಿಂದ ನಡೆಯುತ್ತಿರುವ ಯೂಕ್ರೇನ್ ಯುದ್ಧ ಅದೆಷ್ಟೋ ಮಂದಿಯ ಬಾಳನ್ನು ನರಕ ಮಾಡಿದೆ. ಅದರಲ್ಲಿ ಒಬ್ಬರು 23 ವರ್ಷದ ಓಕ್ಸಾನಾ. ನರ್ಸ ಆಗಿ ಕೆಲಸ ಮಾಡುತ್ತಿದ್ದ ಇವರು, ಬಾಂಬ್ ಸ್ಫೋಟದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಇವರ ಕೈಯ ಹಲವಾರು ಬೆರಳುಗಳು ನಜ್ಜುಗುಜ್ಜಾಗಿವೆ. ಇವರು ಕಳೆದ ಆರು ವರ್ಷಗಳಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು. ಆದರೆ ಸ್ಫೋಟದಿಂದ ಓಕ್ಸಾನಾ ಆಸ್ಪತ್ರೆಗೆ ದಾಖಲಾದಾಗ ತನ್ನ ಪ್ರೇಮಿ ತನ್ನ ಕೈಬಿಡುವವನೇ ಎಂಬ ಸಂದೇಹ ವ್ಯಕ್ತಪಡಿಸಿದ್ದರು.
ಆದರೆ ಆತ ಹಾಗೆ ಮಾಡಲಿಲ್ಲ. ತನ್ನ ಪ್ರಿಯತಮನೆಯನ್ನು ಆಸ್ಪತ್ರೆಯಲ್ಲಿಯೇ ಮದುವೆಯಾಗಿದ್ದಾನೆ. ಇದರ ವಿಡಿಯೋವನ್ನು ಯೂಕ್ರೇನ್‌ನ ಸಂಸ್ಕೃತಿ ಹಾಗೂ ಮಾಹಿತಿ ನೀತಿ ಮಂತ್ರಾಲಯದಡಿ ಬರುವ ಸೆಂಟರ್ ಫಾರ್ ಸ್ಟ್ರ್ಯಾಟಜಿಕ್ ಕಮ್ಯೂನಿಕೇಷನ್ಸ್ ಆಂಡ್ ಇನ್ಫಾರ್ಮೇಷನ್ ಸೆಕ್ಯೂರಿಟಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಓಕ್ಸಾನಾ ತಮ್ಮ ಪತಿಯೊಡನೆ ಕುಣಿಯುತ್ತಿದ್ದುದನ್ನು ಇದರಲ್ಲಿ ಕಾಣಬಹುದಾಗಿದೆ.
'ಈ ಮದುವೆಯು ಆಸ್ಪತ್ರೆಯಲ್ಲಿ ನಡೆದಿದೆ. ನಾವು ಅವರ ಈ ಜೀವನ ಯಾವಾಗಲೂ ಸುಖಮಯವಾಗಿರಲಿ ಎಂದು ಬಯಸುತ್ತೇವೆ. ಇಂತಹ ಜನರಿಂದಾಗಿಯೇ ಯೂಕ್ರೇನ್ ಇಂದು ಸದೃಢವಾಗಿ ನಿಲ್ಲುವಂತಾಗಿದೆ, ಅವರಿಗೆ ಧನ್ಯವಾದಗಳು' ಎಂದು ಟ್ವಿಟರ್‌ನಲ್ಲಿ ಬರೆಯಲಾಗಿದೆ.
ನೀವೂ ನೋಡಿ ಈ ವಿಡಿಯೋ: