ಕೋಲ್ಕತಾ: ಕೋರ್ಟ್ಗೆ ಹೋಗುವ ಕೇಸ್ಗಳ ಪೈಕಿ ಹೆಚ್ಚಿನವು ಬೇಗನೇ ಮುಗಿಯುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಎಷ್ಟೋ ಕೇಸ್ಗಳು ಹತ್ತಿಪ್ಪತ್ತು ವರ್ಷಗಳಿಂದ ಆ ಕೋರ್ಟ್, ಈ ಕೋರ್ಟ್ ಎಂದು ಸಾಗುತ್ತಲೇ ಇರುತ್ತದೆ. ಶತಮಾನದಿಂದ ರಾಮ ಜನ್ಮಭೂಮಿ ಕೇಸ್ ಕೂಡ ಕೋರ್ಟ್ನಲ್ಲಿ ಇದ್ದು, ಅದು ಕೊನೆಗೂ ಬಗೆಹರಿದಿದೆ.
ಈ ಕೇಸು ಪಶ್ಚಿಮಬಂಗಾಳದ ದಕ್ಷಿಣೇಶ್ವರ ಕಾಳಿ ಮಂದಿರದಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರದ್ದು. ಇದರ ವಿಚಾರಣೆ ಸುಮಾರು 150 ವರ್ಷಗಳಿಂದ ಕೋಲ್ಕತಾ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ನಾಲ್ಕೈದು ಪೀಳಿಗೆ ಬಂದು ಹೋದರೂ ಈ ಕೇಸು ಇನ್ನೂ ಬಗೆಹರಿದಿಲ್ಲ!
ಏನಿದು ಕೇಸು?
ಈ ದೇಗುಲವನ್ನು ರಾಣಿ ರಾಸಮಣಿ 1800ರ ದಶಕದಲ್ಲಿ ನಿರ್ಮಿಸಿದ್ದರು. 1861ರಲ್ಲಿ ಅವರು ಮೃತಪಟ್ಟರು. ಅಲ್ಲಿಂದ ಶುರುವಾದದ್ದು ಈ ಸಮಸ್ಯೆ. ರಾಣಿ ಮೃತರಾಗುವುದಕ್ಕೂ ಮೊದಲು ದೇಗುಲಕ್ಕೆ ಐವರು ಪ್ರಮುಖರನ್ನು ಆಯ್ಕೆ ಮಾಡಿದರು. ಇದನ್ನು ಅದೇ ಸಾಲಿನಲ್ಲಿ ಅಂದರೆ ರಾಣಿ ಮೃತಪಟ್ಟು ಆರು ತಿಂಗಳ ಬಳಿಕ ಅಲಿಪೋರ್ ಕೋರ್ಟ್ನಲ್ಲಿ ನೋಂದಾಯಿಸಲಾಯಿತು ಕೂಡ.
ಆದರೆ 1972ರಲ್ಲಿ ಶುರುವಾಯ್ತು ಸಮಸ್ಯೆ. ಆ ಪತ್ರದಲ್ಲಿ ದೇಗುಲವನ್ನು ನಡೆಸಲು ಮಾರ್ಗದರ್ಶನವಿಲ್ಲವೆಂದು ಹೈ ಕೋರ್ಟ್‌ನ ಬ್ರಿಟಿಷ್ ನ್ಯಾಯಮೂರ್ತಿ ಎದುರು ಇಬ್ಬರು ಪ್ರಮುಖರು ಅರ್ಜಿ ಸಲ್ಲಿಸಿದ್ದರು. ಈ ಕೇಸು 40 ವರ್ಷ ನಡೆಯಿತು. ಆನಂತರ ಮಾರ್ಗಸೂಚಿ ರಚಿಸಲಾಯಿತು. 1929ರಲ್ಲಿ ದೇಗುಲಕ್ಕೆ ಮಂಡಳಿ ರಚಿಸಲು ಆದೇಶ ನೀಡಲಾಯಿತು.
ನಂತರ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸಲು ಟ್ರಸ್ಟಿಗಳ ಮಂಡಳಿಯನ್ನು ರಚಿಸಲಾಯಿತು. ಆದರೆ ಅಲ್ಲಿಂದ ಮತ್ತೆ ಸಮಸ್ಯೆ ಉಲ್ಬಣಗೊಂಡಿತು. 1986 ರಲ್ಲಿ ಹೈಕೋರ್ಟ್ ಟ್ರಸ್ಟಿಗಳ ಮಂಡಳಿಯ ಚುನಾವಣೆಯನ್ನು ನ್ಯಾಯಾಲಯ ಮತ್ತು ವಿಶೇಷ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಬೇಕೆಂದು ಆದೇಶವನ್ನು ಹೊರಡಿಸಿತ್ತು. ಅಂದಿನಿಂದ ಸುಮಾರು 30 ವರ್ಷಗಳಿಂದ ಕುಶಾಲ್ ಚೌಧರಿ ಮತ್ತು ಅವೆ ಸಹಚರರು ಟ್ರಸ್ಟಿಗಳ ಮಂಡಳಿಯನ್ನು ನಡೆಸುತ್ತಿದ್ದಾರೆ. ದೇವಸ್ಥಾನದ ನಿರ್ವಹಣೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಇನ್ನೊಂದು ತಂಡ ಆರೋಪಿಸಲು ತೊಡಗಿತು.
ಈ ನಡುವೆಯೇ, ಕಳೆದ ವರ್ಷ ಅಂದರೆ 2021ರಲ್ಲಿ ಮತ್ತೊಮ್ಮೆ 1972ರ ಮೂಲ ಪ್ರಕರಣವೇ ಕೋರ್ಟ್ ಮೆಟ್ಟಿಲೇರಿದೆ. ಕಳೆದ 35 ವರ್ಷಗಳಿಂದ ದೇಗುಲದ ಮಂಡಳಿಗೆ ಒಬ್ಬರೇ ಮುಖ್ಯಸ್ಥರಿದ್ದು, ಪ್ರಮುಖರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಹೊಸದಾಗಿ ದೂರನ್ನು ಕೋರ್ಟ್ ಮುಂದಿಡಲಾಗಿದೆ. ಇದೀಗ ಒಂದು ತಿಂಗಳಿನಿಂದ ಸತತವಾಗಿ ಕೇಸಿನ ವಿಚಾರಣೆ ಕೋಲ್ಕತ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.