ತಿರುವನಂತಪುರ: ಬಾಲಕಿಯನ್ನು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಕರೆಸಿ ಬಳಿಕ ಸಮಸ್ತ ಮುಖಂಡರೊಬ್ಬರು ಅವಮಾನಿಸಿದ ಘಟನೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಘಟನೆಯ ಕುರಿತು ಆಯೋಗವು ಸಮಸ್ತ ಕಾರ್ಯದರ್ಶಿ, ಪೆರಿಂತಲ್ಮಣ್ಣಾ ಪೋಲೀಸರು ಮತ್ತು ಮಕ್ಕಳ ರಕ್ಷಣಾ ಅಧಿಕಾರಿಯಿಂದ ವರದಿ ಕೇಳಿದೆ.
ಸಮಸ್ತ ಮುಖಂಡ ಬಾಲಕಿಯನ್ನು ನಿಂದಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ದೊಡ್ಡ ವಿವಾದವಾಗಿತ್ತು. ಇದರೊಂದಿಗೆ ಸಮಸ್ತವನ್ನು ಟೀಕಿಸಿ ಹಲವರು ರಂಗಕ್ಕೆ ಬಂದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಘಟನೆಯನ್ನು ಟೀಕಿಸಿದ್ದರು.
10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಶೈಕ್ಷಣಿಕ ಸಾಧನೆಗೆ ಬಹುಮಾನ ನೀಡಲು ವೇದಿಕೆಗೆ ಆಹ್ವಾನಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇನ್ನು ಮುಂದೆ ಸಮಸ್ತದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೆಣ್ಣು ಮಕ್ಕಳನ್ನು ಕರೆದರೆ ತೋರಿಸುತ್ತೇವೆ ಎಂದು ಸಮಸ್ತ ಮುಖಂಡ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಸಂಘಟಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಬ್ದುಲ್ಲಾ ಮುಸ್ಲಿಯಾರ್ ಅವರು ಸಮಸ್ತ ಶಿಕ್ಷಣ ಮಂಡಳಿಯ ಅಧ್ಯಕ್ಷರು.