ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಹತ್ಯೆ (1995) ಪ್ರಕರಣದಲ್ಲಿ 26 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಕಾರಣಕ್ಕೆ, ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಬಲವಂತ್ ಸಿಂಗ್ ರಾಜೋನಾ ಎಂಬುವರ ಮನವಿಯನ್ನು ಎರಡು ತಿಂಗಳೊಳಗೆ ನಿರ್ಧರಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ಈ ಕುರಿತು ಸೂಚನೆ ನೀಡಿತು.
1995ರ ಆಗಸ್ಟ್ 31ರಂದು ಪಂಜಾಬ್ ಸಚಿವಾಲಯದ ಹೊರಗೆ ಸಂಭವಿಸಿದ್ದ ಸ್ಫೋಟದಲ್ಲಿ ಬಿಯಾಂತ್ ಸಿಂಗ್ ಮತ್ತು ಇತರ 16 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಪಂಜಾಬ್ ಪೋಲೀಸ್‌ನ ಮಾಜಿ ಕಾನ್‌ಸ್ಟೆಬಲ್ ರಾಜೋನಾ ಅವರಿಗೆ ವಿಶೇಷ ನ್ಯಾಯಾಲಯವು 2007ರಲ್ಲಿ ಶಿಕ್ಷೆ ವಿಧಿಸಿತ್ತು.