ಕಾಸರಗೋಡು: ಜಿಲ್ಲೆಯಲ್ಲಿ ನಾಲ್ವರು ಮಕ್ಕಳಲ್ಲಿ ಶಿಗೆಲ್ಲ ವೈರಸ್ ಪತ್ತೆಯಾಗಿದೆ. 51 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ಚೆರ್ವತ್ತೂರು ಬಳಿ ಶಾವರ್ಮಾ ಸೇವಿಸಿ ಬಾಲಕಿಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ ಮಾದರಿಯನ್ನು ತಪಾಸಣೆ ನಡೆಸಿದಾಗ ಶಿಗೆಲ್ಲಾ ವೈರಸ್ ಇರುವಿಕೆ ಪತ್ತೆಯಾಗಿದೆ. ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ರಕ್ತ ಮತ್ತು ಮಲದ ಸ್ಯಾಂಪಲ್‍ನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆಗೊಳಪಡಿಸಿದಾಗ ಶಿಗೆಲ್ಲ ಇರುವುದು ದೃಢಪಟ್ಟಿದೆ.
ಏನಿದು ಶಿಗೆಲ್ಲ?:
ಶಿಗೆಲ್ಲ ವಿಭಾಗಕ್ಕೆ ಸೇರಿದ ಬ್ಯಾಕ್ಟಿ?ರಿಯಾದಿಂದ ಶಿಗೆಲ್ಲೋಸಿಸ್ ಉಂಟಾಗುತ್ತದೆ. ಈ ರೋಗದ ಮುಖ್ಯ ಲಕ್ಷಣವೆಂದರೆ ಅತಿಸಾರ. ಆದರೆ ಇದು ಸಾಮಾನ್ಯ ಅತಿಸಾರಕ್ಕಿಂತ ಹೆಚ್ಚು ಗಂಭೀರವಾಗಿರುತ್ತದೆ. ಕಲುಷಿತ ನೀರು ಮತ್ತು ಕಲುಷಿತ ಆಹಾರ, ತೊಳೆಯದ ಹಣ್ಣು ಮತ್ತು ತರಕಾರಿಗಳ ಬಳಕೆ, ಸೋಂಕಿತರು ಸಿದ್ಧಪಡಿಸಿದ ಆಹಾರ ಸೇವಿಸುವುದರಿಂದ ಶಿಗೆಲ್ಲೋಸಿಸ್ ಹರಡುತ್ತದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ರೋಗ ಲಕ್ಷಣಗಳು ಉಲ್ಬಣಗೊಂಡರೆ ಸಾಯುವ ಸಾಧ್ಯತೆ ಹೆಚ್ಚಾಗಿದೆ. ಕಾಳಜಿ ವಹಿಸದಿದ್ದರೆ ಶಿಗೆಲ್ಲ ಬಹಳ ಬೇಗ ಹರಡುತ್ತದೆ. ರೋಗಿಯ ಮಲ ವಿಸರ್ಜನೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದ ರೋಗ ಸುಲಭವಾಗಿ ಹರಡುತ್ತದೆ.
ಕಾಸರಗೋಡಿನಲ್ಲಿ ಮುಂಜಾಗ್ರತಾ ಕ್ರಮ!
ಜಿಲ್ಲೆಯಲ್ಲಿ ಶಿಗೆಲ್ಲ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರಗೊಳಿಸಿದೆ. ಚೆರ್ವತ್ತೂರಿನಲ್ಲಿ ವಿಷಾಹಾರ ಸೇವನೆಯಿಂದ ಬಾಲಕಿ ಮೃತಪಟ್ಟಿರುವುದು ಶಿಗೆಲ್ಲ ಬ್ಯಾಕ್ಟೀರಿಯಾದಿಂದ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ. ರಾಮದಾಸ್ ತಿಳಿಸಿದ್ದಾರೆ.
ಈ ತನಕ ವಿಷಾಹಾರ ಸೇವನೆಯಿಂದ 51 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಯಾರ ಸ್ಥಿತಿಯೂ ಚಿಂತಾಜನಕವಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಅತಿಸಾರ ಸಮೀಕ್ಷೆ, ಕುಡಿಯುವ ನೀರಿನ ಮೂಲಗಳ ಕ್ಲೋರಿನೇಷನ್ ಸಮೀಕ್ಷೆ ಮತ್ತು ಆಹಾರ ತಯಾರಿಕೆ ಮತ್ತು ವಿತರಣಾ ಕೇಂದ್ರಗಳ ನೈರ್ಮಲ್ಯ ತಪಾಸಣೆ ಕೈಗೊಳ್ಳಲಾಗಿದೆ.
ಜ್ವರ, ಅತಿಸಾರ, ವಾಂತಿ, ಹೊಟ್ಟೆ ನೋವು, ಆಯಾಸ ಮತ್ತು ರಕ್ತಸಿಕ್ತ ಮಲ ರೋಗ ಲಕ್ಷಣಗಳನ್ನು ಹೊಂದಿರುವವರಿಗೆ ಮನೆ ಭೇಟಿ ಮೂಲಕ ರೋಗ ನಿರ್ಣಯ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಕುಡಿಯುವ ನೀರಿನ ಮೂಲಗಳನ್ನು ಕ್ಲೋರಿನೇಟ್ ಮಾಡುವ ಹಾಗೂ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಜಿಲ್ಲೆಯ ಎಲ್ಲ ಆಹಾರ ತಯಾರಿಕೆ ಮತ್ತು ವಿತರಣಾ ಕೇಂದ್ರಗಳಲ್ಲಿ ಸ್ವಚ್ಛತೆ ತಪಾಸಣೆ ನಡೆಸಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಶಿಗೆಲ್ಲ ರೋಗ ಹರಡುತ್ತಿರುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಸುಳ್ಳು ಪ್ರಚಾರ ನಂಬಬಾರದು ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.