ಬದಿಯಡ್ಕ: ಮಾನವನಿಗೆ ಸಂಕಷ್ಟ ಬಂದೊದಗುವುದು ವಿಧಿಲಿಖಿತ. ಆದರೂ ಮಾನವೀಯತೆ ಮೆರೆದು ಸಹಕರಿಸುವ ದಾನಿಗಳಿಗೇನೂ ಕೊರತೆಯಿಲ್ಲ.
ನೀರ್ಚಾಲು ಬಳಿಯ ಪುದುಕೋಳಿ ನೆಲ್ಲಿಯಡ್ಕ ವಸಂತ- ಚಂದ್ರಲೇಖಾ ದಂಪತಿಗಳು ಸಂತೃಪ್ತಿಯ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ವಸಂತ ಅವರಿಗೆ ಕಿಡ್ನಿ ಸಂಬಂಧ ಅನಾರೋಗ್ಯ ಕಾಡಲಾರಂಭಿಸಿ ವಿವಿಧ ಆಯುರ್ವೇದ ಅಲೋಪತಿವರೆಗೂ ಔಷಧೋಪಚಾರ ಮಾಡಿ ನಿರೀಕ್ಷಿತ ಫಲ ಲಭಿಸಿಲ್ಲ. ಲಕ್ಷಾಂತರ ರೂಪಾಯಿ ಖರ್ಚಾಗಿದೆ.
ಈಗ ವಾರಕ್ಕೆ 2 ಸಲ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಡೆಯುತ್ತಿದೆ. ಚಿಕಿತ್ಸೆಯ ಮಧ್ಯೆ ಕೂಲಿ ಕೆಲಸ ಮಾಡಿ ಜೀವನವನ್ನು ಸಾಗಿಸುತ್ತಿದ್ದ ಅವರು ದುರದೃಷ್ಟವಶಾತ್ ಕೆಲಸದ ವೇಳೆ ಬಿದ್ದು ಕೈಗೆ ತೀವ್ರ ತಾಗಿ ಕಾಸರಗೋಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಇದ್ದಾರೆ. ಈಗಾಗಲೇ ಲಕ್ಷಾಂತರ ರೂ. ಖರ್ಚಾಗಿದ್ದು ಈ ಬಡಕುಟುಂಬ ಇದೀಗ ಬರಸಿಡಿಲು ಬಡಿದಂತೆ ದಾರಿ ಕಾಣದೆ ಕಂಗಾಲಾಗಿದೆ.
ಚಿಕಿತ್ಸೆಯ ಖರ್ಚು ಭರಿಸಲಾಗದ ಈ ಬಡಕುಟುಂಬ ನೀರ್ಚಾಲಿನ ಸೇವಾ ಭಾರತಿ ಸಂಸ್ಥೆಯನ್ನು ಸಂಪರ್ಕಿಸಿ ಸಹಾಯ ಧನ ಯಾಚಿಸಿದ್ದಾರೆ. ಸಹೃದಯ ಬಂಧುಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಈ ಬಡಕುಟುಂಬದ ಜೊತೆ ನಿಂತು ತಮ್ಮಿಂದಾದ ರೀತಿಯಲ್ಲಿ ಧನಸಹಾಯ ನೀಡಿ ಸಹಕರಿಸಬೇಕೆಂದು ಈ ಮೂಲಕ ಸೇವಾ ಭಾರತಿ ವಿನಂತಿಸಿದೆ. ನೆರವು ನೀಡುವವರು ಗೂಗಲ್ ಪೇ ಚಂದ್ರಲೇಖಾ- 9544634446 ಅಥವಾ ಸೇವಾ ಭಾರತಿ ನೀರ್ಚಾಲು ಘಟಕವನ್ನು ಸಂಪರ್ಕಿಸಬಹುದು ಎಂದು ವಿನಂತಿಸಲಾಗಿದೆ.