ನವದೆಹಲಿ: ಮೇ 13 ರಂದು ಗೋಧಿ ರಫ್ತು ನಿಷೇಧಿಸುವ ಮುನ್ನ ಕಸ್ಟಮ್ಸ್ ಪ್ರಾಧಿಕಾರದಲ್ಲಿ ನೋಂದಾಯಿಸಲಾದ ಗೋಧಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಮಂಗಳವಾರ ಅನುಮತಿ ನೀಡಿದೆ.
ಗೋಧಿ ರಫ್ತು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ನಿಯಮಾವಳಿಗಳನ್ನು ಸಡಿಲಗೊಳಿಸಿದ್ದು, 13.5.2022 ರಂದು ಅಥವಾ ಅದಕ್ಕು ಮೊದಲು ಕಸ್ಟಮ್ಸ್‌ಗೆ ಪರೀಕ್ಷೆಗಾಗಿ ಗೋಧಿ ರವಾನೆಗಳನ್ನು ಹಸ್ತಾಂತರಿಸಲಾಗಿದೆ ಮತ್ತು ಅವರ ವ್ಯವಸ್ಥೆಗಳಲ್ಲಿ ನೋಂದಾಯಿಸಲಾಗಿದೆ. ಅಂತಹ ಸರಕುಗಳನ್ನು ರಫ್ತು ಮಾಡಲು ಅನುಮತಿಸಲಾಗುವುದು ಎಂದು ವಾಣಿಜ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 13 ರಂದು, ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯವು(DGFT) ಬೆಲೆ ಏರಿಕೆಯನ್ನು ನಿಯಂತ್ರಿಸಲು ತಕ್ಷಣವೇ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿತು.
ಕಾಂಡ್ಲಾ ಬಂದರಿನಲ್ಲಿ ಈಜಿಪ್ಟ್‌ಗೆ ರಫ್ತು ಮಾಡಲು ಈಗಾಗಲೇ ಲೋಡ್ ಆಗಿರುವ ಗೋಧಿ ರವಾನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕಾಂಡ್ಲಾ ಬಂದರಿನಲ್ಲಿ ಲೋಡ್ ಆಗಿರುವ ಗೋಧಿ ಸರಕನ್ನು ರಫ್ತು ಮಾಡಲು ಅನುಮತಿ ನೀಡುವಂತೆ ಈಜಿಪ್ಟ್ ಸರ್ಕಾರ ಮಾಡಿದ ವಿನಂತಿಯನ್ನು ಕೇಂದ್ರ ಪುರಸ್ಕರಿಸಿದೆ.