ಕಾಸರಗೋಡು: ಜಿಲ್ಲೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿ ಮೃತಪಟ್ಟ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಆಹಾರಸುರಕ್ಷಾ ವಿಭಾಗ ಅಧಿಕಾರಿಗಳು ಜಿಲ್ಲೆಯಲ್ಲಿ ತಪಾಸಣೆ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವ ಮೀನಿನ ವಾಹನಗಳನ್ನು ಗಡಿ ಪ್ರದೇಶದಲ್ಲಿ ತಡೆಹಿಡಿದು ತಪಾಸಣೆ ನಡೆಸಲಾಗುತ್ತಿದೆ.
ಆಪರೇಶನ್ ಮತ್ಸ್ಯ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಆಂಧ್ರ, ಗೋವ, ಕರ್ನಾಟಕದಿಂದ ಕಾಸರಗೋಡು ಮೂಲಕ ಕೇರಳಕ್ಕೆ ಪ್ರವೇಶಿಸುವ ವಾಹನಗಳನ್ನು ತಲಪ್ಪಾಡಿ, ಮಂಜೇಶ್ವರದಲ್ಲಿ ತಡೆಹಿಡಿದು ತಪಾಸಣೆಗೊಳಪಡಿಸಲಾಗುತ್ತಿದೆ. ಈ ರೀತಿ ತಡೆಹಿಡಿದು ಒಟ್ಟು 34ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗಾಗಿ ಲ್ಯಾಬ್‍ಗೆ ಕಳುಹಿಸಿಕೊಟ್ಟಿರುವುದಾಗಿ ಆಹಾರ ಸುರಕ್ಷಾ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ. ಮೊಬೈಲ್ ತಪಾಸಣಾ ವಾಹನ ಆಯಾ ಪ್ರದೇಶಕ್ಕೆ ತೆರಳಿ, ಮೀನಿನಲ್ಲಿನ ಫೋರ್ಮಾಲಿನ್ ಅಲೋನಿಯಂ ರಾಸಾಯನಿಕದ ಅಂಶವನ್ನು ಪತ್ತೆಹಚ್ಚಲಾಗುತ್ತಿದೆ. ಇದರ ಜತೆಗೆ ಇತರ ಖಾದ್ಯ ಉತ್ಪನ್ನಗಳನ್ನೂ ತಪಾಸಣೆ ನಡೆಸಲಾಗುತ್ತಿದೆ. ಆಹಾರ ಸುರಕ್ಷಾ ವಿಭಾಗದ ಸಹಾಯಕ ಆಯುಕ್ತ ಪಿ.ಕೆ ಜಾನ್ ವಿಜಯಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.