ಬದಿಯಡ್ಕ : ಪ್ರತಿಯೊಬ್ಬರಲ್ಲೂ ಸುಪ್ತವಾದ ಪ್ರತಿಭೆ ಇರುತ್ತದೆ. ಅದರ ಅನಾವರಣ ಇಂತಹಾ ಶಿಬಿರಗಳಿಂದ ಸಾಧ್ಯ. ಎಳೆಯ ಮಕ್ಕಳಲ್ಲಿ ಉತ್ತಮ ನಡತೆಗಳು ಬೇಗನೆ ಪರಿಣಾಮ ಬೀರುತ್ತದೆ. ಅವರ ಯಶಸ್ಸಿಗೆ ಕಾರಣವಾಗುತ್ತವೆ. ಶಾಲಾ ಪಠ್ಯಗಳಲ್ಲಿ ಇಲ್ಲದ ವಿಚಾರಗಳು ಇಂತಹಾ ಶಿಬಿರದಲ್ಲಿ ಮಕ್ಕಳಿಗೆ ದೊರೆಯುತ್ತದೆ' ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಅವರು ಭಾನುವಾರ ಎಡನೀರು ಉಡುಪುಮೂಲೆ ಭೂಮಿಕಾ ಪ್ರತಿಷ್ಠಾನದ ಆಶ್ರಯದಲ್ಲಿ ಎಡನೀರು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ 5 ದಿನಗಳ ಕನ್ನಡ ಸಂಸ್ಕøತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
'ಶಿಬಿರಗಳಿಂದ ಸುಪ್ತ ಪ್ರತಿಭೆಗಳ ಅನ್ವೇಷಣೆಯಾಗುತ್ತದೆ. ಪಠ್ಯ ಚಟುವಟಿಕೆಯ ಜತೆಗೆ ಪಠ್ಯೇತರ ಚಟುವಟಿಕೆ ಮುಖ್ಯ. ಇದೇ ರೀತಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ ಹಾಗೂ ಸಂಸ್ಕøತ ಸಂಭಾಷಣಾ ಶಿಬಿರಗಳು ನಡೆಯಬೇಕು. ಇದು ಪ್ರಸ್ತುತ ಅಗತ್ಯ. ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಮಾತನಾಡಿ,'ವ್ಯಕ್ತಿತ್ವ ವಿಕಸನಕ್ಕೆ ಅನುಭವ ಪಠ್ಯ ಮುಖ್ಯ. ಕಲಿಕೆಯು ಅಂಕ ಗಳಿಕೆಗೆ ಸೀಮಿತವಾಗಬಾರದು. ಶಿಸ್ತು, ಶ್ರಮ ಹಾಗೂ ಶ್ರದ್ಧೆಯು ಮಕ್ಕಳ ಯಶಸ್ಸಿನ ಗುಟ್ಟು. ಇದನ್ನು ಎಳವೆಯಿಂದಲೇ ಜೀವನದಲ್ಲಿ ಮಕ್ಕಳು ಅಳವಡಿಸಿಕೊಳ್ಳಬೇಕು' ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ತೆಕ್ಕುಂಜೆ ಕುಮಾರಸ್ವಾಮಿ ಮಾತನಾಡಿ,'ಮಕ್ಕಳಿಗೆ ಸಂಸ್ಕøತಿಯನ್ನು ಕಲಿಸಬೇಕು. ಶಾಲಾ ಪಠ್ಯದ ಜತೆಗೆ ಸಂಸ್ಕøತಿಯ ಪಠ್ಯವೂ ಕೂಡಾ ಅಗತ್ಯ' ಎಂದರು.
ಕಾರ್ಯಕ್ರಮದಲ್ಲಿ ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಧುಸೂದನನ್, ಭೂಮಿಕಾ ಪ್ರತಿಷ್ಠಾನದ ಖಜಾಂಜಿ ರಾಘವೇಂದ್ರ ಭಟ್ ಉಡುಪುಮೂಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಿಎಎಂಎಸ್ ಪದವಿಯಲ್ಲಿ 4ನೇ ರ್ಯಾಂಕ್ ಪಡೆದ ಎಡನೀರಿನ ಡಾ. ಶುಭಾ ಎಸ್ ಭಟ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ಆದ್ಯಂತ್ ಅಡೂರು ರಚಿಸಿದ 'ಚುಟುಚುಟುಕು' ಚುಟುಕು ಸಾಹಿತ್ಯ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಹಿರಿಯ ವ್ಯಂಗ್ಯಚಿತ್ರಕಾರ ವೆಂಕಟ್ ಭಟ್ ಎಡನೀರು ಕೃತಿ ಪರಿಚಯ ಮಾಡಿದರು. ಶಿಬಿರಾರ್ಥಿಗಳ ಪರವಾಗಿ ಶ್ರೀನಂದಾ, ಪ್ರಜ್ಞಾ, ಅನ್ವಿತಾ ಅನಿಸಿಕೆ ಹೇಳಿದರು. ಆದ್ಯಂತ್ ಅಡೂರು ಶಿಬಿರದ ಅನುಭವದ ಕುರಿತು ಕವನ ವಾಚನ ಮಾಡಿದರು. ಶಿಬಿರದ ಬಗ್ಗೆ ಪೋಷಕರ ಪರವಾಗಿ ದಿವ್ಯಾ ಅನಿಸಿಕೆ ಹೇಳಿದರು. ಭೂಮಿಕಾ ಪ್ರತಿಷ್ಠಾನದ ನಿರ್ದೇಶಕಿ ವಿದಿಷಿಃ ಅನುಪಮಾ ರಾಘವೇಂದ್ರ ಸ್ವಾಗತಿಸಿ ವಂದಿಸಿದರು. ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಲಾಯಿತು. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸನ್ನ ಐವರ್ನಾಡು(ಕ್ರಾಫ್ಟ್), ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ(ಸುಗಮ ಸಂಗೀತ), ಉದಯ ಸಾರಂಗ್, ರಾಜೇಶ್ ವಿಟ್ಲ, ಅಶೋಕ ಕೊಡ್ಲಮೊಗರು (ರಂಗಭೂಮಿ ಚಟುವಟಿಕೆ), ರಾಜು ಕಿದೂರು(ಪರಿಸರ ಜಾಗೃತಿ), ನಿರ್ಮಲ್ ಕುಮಾರ್ ಕಾರಡ್ಕ(ಆರೋಗ್ಯ) ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಸಮಾರು 60ಕ್ಕೂ ಮಿಕ್ಕಿದ ಮಕ್ಕಳು ಭಾಗವಹಿಸಿದ್ದರು.