ಬೀಜಿಂಗ್: ಚೀನಾದಲ್ಲಿ ಜನಸಂಖ್ಯಾ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿದ್ದು, ಜನರು ಬೇಗನೆ ಮದುವೆಯಾಗಿ ಕನಿಷ್ಠ ಮೂರು ಮಕ್ಕಳನ್ನು ಹೊಂದುವಂತೆ ಸರ್ಕಾರ ಆದೇಶಿಸಿದೆ. ಕೊನೆಯಾಗದ ಲಾಕ್ ಡೌನ್ ಹಾಗೂ ಕ್ವಾರಂಟೈನ್ ನಿಂದಾಗಿ ಸಂಕಷ್ಟದಲ್ಲಿರುವ ಜನರು, ಸಾಕಷ್ಟು ಆರ್ಥಿಕ ಭದ್ರತೆ ಇಲ್ಲದೆ ಹೇಗೆ ಮಕ್ಕಳನ್ನು ಹೊಂದಲು ಸಾಧ್ಯ ಎಂದು ಆಕ್ಷೇಪಿಸುತ್ತಿದ್ದಾರೆ.
ಆಹಾರದ ಕೊರತೆ, ಆದಾಯದ ಕೊರತೆ, ಬೆಲೆ ಏರಿಕೆ, ಆರೋಗ್ಯ ಸಮಸ್ಯೆ ಮತ್ತಿತರ ಸಮಸ್ಯೆಗಳಿಂದ ಬೇಸತ್ತು ಮನೆಯಲ್ಲಿರುವ ದೇಶದ ಜನರಿಗೆ ಈ ಆದೇಶ ಭ್ರಮನಿರಸನವನ್ನುಂಟು ಮಾಡಿವೆ ಎಂದು ಹಾಂಗ್ ಕಾಂಗ್ ಪೋಸ್ಟ್ ವರದಿ ಮಾಡಿದೆ. ಹೆಚ್ಚಿನ ಮಕ್ಕಳನ್ನು ಹೇರುವಂತೆ ಸರ್ಕಾರದ ಅಧಿಕೃತ ಆದೇಶದ ವಿರುದ್ಧ ಬಹುತೇಕ ಚೀನಾ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ಅದು ಹೇಳಿದೆ.
ಚೀನಾ ರಾಷ್ಟ್ರೀಯ ಅಂಕಿಸಂಖ್ಯಾ ಬ್ಯೂರೋ ಪ್ರಕಾರ, 2013 ಮತ್ತು 2019 ನಡುವಣ ಆರು ವರ್ಷಗಳ ಅವಧಿಯಲ್ಲಿ ಚೀನಾ ಜನರ ವಿವಾಹ ಸಂಖ್ಯೆಯಲ್ಲಿ ಕಳೆದ 36 ವರ್ಷಗಳಲ್ಲಿಯೇ ಕಡಿಮೆ ವಿವಾಹ ದಾಖಲಾಗಿದ್ದು, ಕಳೆದ ವರ್ಷ ಕೇವಲ 7.6 ಮಿಲಿಯನ್ ದಂಪತಿಗಳು ಮಾತ್ರ ನೋಂದಾಯಿಸಿಕೊಂಡಿದ್ದಾರೆ.
ಇದರ ಪರಿಣಾಮವಾಗಿ ಚೀನಾದ ಜನನ ಪ್ರಮಾಣ ಪ್ರತಿ 1000 ಜನರಿಗೆ 7.5 ಕ್ಕೆ ಕುಸಿತವಾಗಿದೆ. ಒಂಬತ್ತು ಪ್ರಾಂತ್ಯಗಳು ಮತ್ತು ವಲಯಗಳಲ್ಲಿ ಜನಸಂಖ್ಯಾ ಬೆಳವಣಿಗೆಯಲ್ಲಿ ಕುಂಠಿತವಾಗಿರುವುದಾಗಿ ವರದಿ ತಿಳಿಸಿದೆ.