ಕೊಚ್ಚಿ: ಚೆರುವತ್ತೂರಿನಲ್ಲಿ ಶವರ್ಮಾದಿಂದ ವಿಷ ಸೇವಿಸಿ ಬಾಲಕಿ ಸಾವನ್ನಪ್ಪಿದ ಘಟನೆಯಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಮಾಧ್ಯಮ ವರದಿಗಳ ಆಧಾರದ ಮೇಲೆ ಹೈಕೋರ್ಟ್ ವಿಭಾಗೀಯ ಪೀಠವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿತು. ಘಟನೆಯ ಬಗ್ಗೆ ವಿವರಣೆ ನೀಡಿ ನಿಲುವು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಕಳೆದ ಭಾನುವಾರ 16 ರ ಹರೆಯದ ಪ್ಲಸ್ ಒನ್ ವಿದ್ಯಾರ್ಥಿನಿ ಶವರ್ಮಾ ಸೇವಿಸಿ ಸಾವನ್ನಪ್ಪಿದ್ದಳು. ಅನೇಕರು ವಿಷಾಹಾರದಿಂದ ಈಗಲೂ ಆಸ್ಪತ್ರೆಯ ಚಿಕಿತ್ಸೆಯಲ್ಲಿರುವರು. ಇಂತಹ ಆಹಾರ ಉತ್ಪಾದನಾ ಕೇಂದ್ರಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಸರ್ಕಾರ ಕ್ರಮಕೈಗೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ.
ಇದೇ ವೇಳೆ ಶವರ್ಮಾ ಸೇವಿಸಿ ಮೃತಪಟ್ಟ 16 ವರ್ಷದ ದೇವಾನಂದೆಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶಿಗೆಲ್ಲ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಶಿಗೆಲ್ಲ ದೇವಾನಂದೆ ಅವರ ಹೃದಯ ಮತ್ತು ಮೆದುಳಿಗೆ ಹಾನಿ ಉಂಟು ಮಾಡಿದೆ ಎಂದು ವರದಿಯಾಗಿದೆ. ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಡಾ.ಎಂ.ವಿ.ರಾಮದಾಸ್ ಅವರು ಕೂಡ ಶವರ್ಮಾದ ಆಹಾರ ವಿಷಯುಕ್ತಗೊಂಡು ಶಿಗೆಲ್ಲ ಬ್ಯಾಕ್ಟೀರಿಯಾ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಚೆರುವತ್ತೂರಿನ ಐಡಿಯಲ್ ಕೂಲ್‍ಬಾರ್‍ನಲ್ಲಿ ದೇವಾನಂದೆ ಶವರ್ಮ ಸೇವಿಸಿದ್ದರು. ಅ|ಂಗಡಿಯ ಮ್ಯಾನೇಜರ್, ಕಾಸರಗೋಡಿನ ಅಹ್ಮದ್ ನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಈವರೆಗೆ ಒಟ್ಟು ಮೂವರನ್ನು ಬಂಧಿಸಲಾಗಿದೆ.