ಲಖನೌ: ಉತ್ತರ ಪ್ರದೇಶದ ಬಾಲಾಪರಾಧಿ ನ್ಯಾಯ ಮಂಡಳಿ (ಜೆಜೆಬಿ) ಬಾಲಾಪರಾಧಿಯೊಬ್ಬನಿಗೆ ವಿಲಕ್ಷಣ ಶಿಕ್ಷೆ ನೀಡಿದ್ದು, 15 ದಿನಗಳ ಕಾಲ ಕೊಟ್ಟಿಗೆಯಲ್ಲಿ ಕೆಲಸ ಮಾಡುವಂತೆ ಆದೇಶಿಸಿದೆ.
ಅಷ್ಟೇ ಅಲ್ಲದೇ 15 ದಿನಗಳ ಕಾಲ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನೂ ಬಾಲಪರಾಧಿ ನ್ಯಾಯಮಂಡಳಿ ವಿಧಿಸಿದೆ.
ಒಂದು ತಿಂಗಳ ಹಿಂದೆ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ 15 ವರ್ಷದ ಬಾಲಕ ಆಕ್ಷೇಪಾರ್ಹ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದ ಆರೋಪ ಸಾಬೀತಾಗಿತ್ತು.
ಪ್ರಕರಣದ ವಿವರಣೆಯನ್ನು ನೀಡಿರುವ ಸರ್ಕಾರದ ಪರ ವಕೀಲರಾದ ಅಡ್ವೊಕೇಟ್ ಅತುಲ್ ಸಿಂಗ್, ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಪ್ರಚೋದನಕಾರಿ ಸಂದೇಶದೊಂದಿಗೆ ಪೋಸ್ಟ್ ಹಾಕಿದ್ದ. ಸಬ್ ಇನ್ಸ್ಪೆಕ್ಟರ್ ರಾಜೇಶ್ ಕುಮಾರ್ ಅವರು ಸಹಸ್ವಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಯನ್ನು ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನ)ದ ಆರೋಪದ ಅಡಿಯಲ್ಲಿ ಬಾಲಾಪರಾಧಿ ಗೃಹಕ್ಕೆ ಕಳಿಸಲಾಗಿತ್ತು. ಆರೋಪಿಯ ವಯಸ್ಸನ್ನು ಪರಿಗಣಿಸಿ ಜೆಜೆಬಿ ಸಮುದಾಯಕ್ಕೆ ಸೇವೆ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ.