ಅಹಮದಾಬಾದ್: ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿಯಾಗಲಿ ಅಥವಾ ಆಮ್ ಆದ್ಮಿ ಪಕ್ಷ ಸೇರಿದಂತೆ ಬೇರೆ ಯಾವುದೇ ಪಕ್ಷಕ್ಕೆ ಸೇರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಮಾರನೇ ದಿನ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರು ಗುರುವಾರ ಹೇಳಿದ್ದಾರೆ.
ಇಂದು ಅಹಮದಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಟಿದಾರ್ ನಾಯಕ, ಕಾಂಗ್ರೆಸ್ ಅತಿದೊಡ್ಡ ಜಾತಿವಾದಿ ಪಕ್ಷವಾಗಿದೆ ಮತ್ತು ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿದ್ದ ತನಗೆ ಯಾವುದೇ ಕರ್ತವ್ಯಗಳನ್ನು ನಿಯೋಜಿಸಿಲ್ಲ ಎಂದು ಆರೋಪಿಸಿದರು.
ಕಾರ್ಯಾಧ್ಯಕ್ಷರ ಜವಾಬ್ದಾರಿ ಕೇವಲ ಕಾಗದದ ಮೇಲಿದೆಯೇ ಹೊರತು ತನಗೆ ಎರಡು ವರ್ಷಗಳಿಂದ ಯಾವುದೇ ಜವಾಬ್ದಾರಿ ನೀಡಿಲ್ಲ. ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿದಾಗ ರಾಜ್ಯದ ಒಂದೇ ಒಂದು ವಿಷಯದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಪಟೇಲ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಇಲ್ಲಿಗೆ ಬಂದಾಗ ಯಾವ ಚಿಕನ್ ಸ್ಯಾಂಡ್ ವಿಚ್ ಕೊಡಬೇಕು, ಯಾವ ಡಯಟ್ ಕೋಕ್ ಕೊಡಬೇಕು ಎಂದು ಕಾಂಗ್ರೆಸ್ ನಾಯಕರು ಚರ್ಚಿಸುತ್ತಾರೆ. ಜಾತಿವಾದಿ ರಾಜಕಾರಣ ಬಿಟ್ಟರೆ ಬೇರೇನೂ ನಡೆಯುವುದಿಲ್ಲ. ಇದಲ್ಲದೆ, ಕಾಂಗ್ರೆಸ್ ಪಕ್ಷದ ನಾಯಕತ್ವವು ಒಂದು ಕುಟುಂಬದ ಸುತ್ತಲೂ ನಡೆಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ನೀವು ಬಿಜೆಪಿ ಅಥವಾ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪಟೇಲ್, "ಬಿಜೆಪಿ ಅಥವಾ ಎಎಪಿ ಸೇರಿದಂತೆ ಇತರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಬಗ್ಗೆ ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಹೇಳಿದರು.