ನವದೆಹಲಿ: 1988 ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಒಂದು ವರ್ಷದ ಕಠಿಣ ಜೈಲು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಇಂದು ಪಟಿಯಾಲ ನ್ಯಾಯಾಲಯದಲ್ಲಿ ಶರಣಾದರು.
ನವತೇಜ್ ಸಿಂಗ್ ಚೀಮಾ ಸೇರಿದಂತೆ ಕೆಲವು ಪಕ್ಷದ ನಾಯಕರೊಂದಿಗೆ ಇಂದು ಮಧ್ಯಾಹ್ನ ಪಟಿಯಾಲ ಜಿಲ್ಲಾ ನ್ಯಾಯಾಲಯಕ್ಕೆ ತೆರಳಿ ಸಿಧು ಶರಣಾದರು. ಚೀಮಾ ಅವರು ಸಿಧುವನ್ನು ಕಾರಿನಲ್ಲಿ ಕೋರ್ಟ್ ಗೆ ಕರೆತಂದರು.
ನಂತರ ವೈದ್ಯಕೀಯ ಪರೀಕ್ಷೆಗಾಗಿ ಪಟಿಯಾಲದ ಮಾತಾ ಕೌಶಲ್ಯ ಆಸ್ಪತ್ರೆಗೆ ಸಿಧು ತೆರಳಿದರು. ಪಟಿಯಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.
ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಶರಣಾಗಲು ಕೆಲವು ವಾರ ಕಾಲಾವಕಾಶ ನೀಡುವಂತೆ ಸಿಧು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಮನವಿಯನ್ನು ತಿರಸ್ಕರಿಸಿತು.
ಅಪರಾಧಿಗೆ ಶಿಕ್ಷೆ ವಿಧಿಸುವಾಗ ತೋರುವ ಯಾವುದೇ ಅನುಚಿತ ಸಹಾನುಭೂತಿಯು ನ್ಯಾಯ ವ್ಯವಸ್ಥೆಗೆ ಹೆಚ್ಚು ಹಾನಿ ಮಾಡುತ್ತದೆ ಮತ್ತು ಕಾನೂನಿನ ಪರಿಣಾಮಕತ್ವದ ಬಗ್ಗೆ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಎಂದು ಗುರುವಾರ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.