ಚೆನ್ನೈ: ಮೈಲಾದುತುರೈ ಜಿಲ್ಲೆಯ ಧರ್ಮಪುರಂ ಅಧೀನಂ ಮಠದಲ್ಲಿ ಶ್ರೀಗಳನ್ನು ಭಕ್ತರು ಮತ್ತು ಶಿಷ್ಯರು ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ಆಚರಣೆಗೆ ಅನುಮತಿ ನಿರಾಕರಣೆಯು ತಮಿಳುನಾಡಿನಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಮಠದಲ್ಲಿನ ಈ ಸಂಪ್ರದಾಯವು ಮಾನವ ಘನತೆಗೆ ಕುಂದನ್ನುಂಟು ಮಾಡುತ್ತದೆ ಮತ್ತು ಇದು ಮುಂದುವರಿಯಕೂಡದು ಎಂದು ಜಿಲ್ಲಾಡಳಿತವು ಹೇಳಿದೆ.
ಪ್ರತಿಪಕ್ಷಗಳು ಆದೇಶವನ್ನು ವಿರೋಧಿಸಿದ್ದು, ಎಐಎಡಿಎಂಕೆ ಮತ್ತು ಬಿಜೆಪಿ ವಿಧಾನಸಭೆಯಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಸರಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಮಠದ ಮುಖ್ಯಸ್ಥರೊಂದಿಗೆ ಮಾತನಾಡಲಿದ್ದಾರೆ ಎಂದು ಹಿಂದು ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಶೇಖರ ಬಾಬು ಅವರು ಹೇಳಿದ್ದಾರೆ.ಡಿಎಂಕೆ ಸರಕಾರವನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು, ಅಧಿಕಾರಿಗಳು ಸಂಪ್ರದಾಯ ಪಾಲನೆಗೆ ಅವಕಾಶ ನೀಡದಿದ್ದರೆ ತಾನೇ ಸ್ವತಃ ಪಲ್ಲಕ್ಕಿಯನ್ನು ಹೊರುವುದಾಗಿ ಹೇಳಿದ್ದಾರೆ.
ಸರಕಾರದ ನಿರ್ದೇಶಕ್ಕೆ ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿರುವ ಮದುರೈ ಅಧೀನಂ ಮಠದ 239ನೇ ಪೀಠಾಧಿಪತಿ ಶ್ರೀಹರಿಹರ ಶ್ರೀ ಜ್ಞಾನಸಂಬಂಧ ದೇಶಿಕ ಸ್ವಾಮಿಗಳು, ಧರ್ಮಪುರಂ ಮಠದ ಶಿಷ್ಯನಾಗಿ ಏನೇ ಆದರೂ ಪಲ್ಲಕ್ಕಿಯನ್ನು ತಾನು ಹೊರುವುದಾಗಿ ಹೇಳಿದರು. ಧರ್ಮಪುರಂ ಅಧೀನಂ ಶೈವರ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಈ ಪುರಾತನ ಮಠದ ಸಂಪ್ರದಾಯಗಳನ್ನು ಗೌರವಿಸಬೇಕೇ ಹೊರತು ವಿರೋಧಿಸಬಾರದು. ಈ ವಿಧಿಯು ಶಿಷ್ಯರಿಂದ ತಮ್ಮ ಗುರುವಿನ ಆರಾಧನೆಯನ್ನು ಸಂಕೇತಿಸುತ್ತದೆ ಮತ್ತು ಅವರು ದಕ್ಷಿಣೆಯ ರೂಪದಲ್ಲಿ ತಮ್ಮ ಗುರುಗಳನ್ನು ಸ್ವಯಂಪ್ರೇರಿತರಾಗಿ ತಮ್ಮ ಭುಜಗಳ ಮೇಲೆ ಹೊತ್ತೊಯ್ಯುತ್ತಾರೆ ಎಂದು ಅವರು ತಿಳಿಸಿದರು.