ನ್ಯೂಯಾರ್ಕ್: ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಟ್ವಿಟರ್ ಇನ್ನು ಮುಂದೆ ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಬುಧವಾರ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಎಂದಿನಂತೆ ಉಚಿತವಾಗಿಯೇ ಇರಲಿದೆ. ಆದರೆ, ವಾಣಿಜ್ಯ ಮತ್ತು ಸರ್ಕಾರದ ಬಳಕೆದಾರರಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದು ಹೇಳಿದ್ದಾರೆ. ಈ ಮೂಲಕ ಟ್ವಿಟರ್, ಪಾವತಿಸಿ ಬಳಸಬಹುದಾದ ಸಾಮಾಜಿಕ ಮಾಧ್ಯಮವಾಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ.
ಟ್ವಿಟರ್ ಈಗಾಗಲೇ 'ಟ್ವಿಟರ್ ಬ್ಲೂ' ಮೂಲಕ ಪಾವತಿ ಆಧಾರಿತ ಸೇವೆಗಳನ್ನು ನೀಡುತ್ತಿದೆ. ಆ ಸೇವೆಯನ್ನು ಪಡೆಯುತ್ತಿರುವ ಬಳಕೆದಾರರಿಗೆ ಪ್ರೀಮಿಯಂ ಆಯ್ಕೆಗಳು ಮತ್ತು ಬಳಕೆಗೆ ತಕ್ಕಂತೆ ಆ್ಯಪ್‌ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.
ಪ್ರಸ್ತುತ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಐಒಎಸ್, ಆ್ಯಂಡ್ರಾಯ್ಡ್ ಹಾಗೂ ವೆಬ್ ಆವೃತ್ತಿಯಲ್ಲೂ ಟ್ವಿಟರ್ ಬ್ಲೂ ಲಭ್ಯವಿದೆ. ತಿಂಗಳ ಚಂದಾದಾರಿಕೆ ಆಯ್ಕೆಯನ್ನು ನೀಡಲಾಗುತ್ತಿದೆ. ಆದರೆ, ಈಗ ಮಸ್ಕ್ ಪ್ರಸ್ತಾಪಿಸಿರುವುದು ಸಾಮಾನ್ಯ ಬಳಕೆದಾರರು ಬಳಸುತ್ತಿರುವ ಟ್ವಿಟರ್ ಬೇಸಿಕ್ ಪ್ಲಾಟ್‌ಫಾರ್ಮ್. ಅಲ್ಲಿರುವ ವಾಣಿಜ್ಯ ಬಳಕೆದಾರರು ಮತ್ತು ಸರ್ಕಾರದ ಬಳಕೆದಾರರಿಗೆ ಶುಲ್ಕ ವಿಧಿಸುವ ಸಾಧ್ಯತೆಯನ್ನು ಅವರು ಹಂಚಿಕೊಂಡಿದ್ದಾರೆ.