ತಿರುವನಂತಪುರಂ: ಕೇರಳದಲ್ಲಿ ನಾನ್ ವೆಜ್ ಹೋಟೆಲ್ಗಳ ಕರ್ಮಕಾಂಡ ದಿನಕ್ಕೊಂದು ಬಯಲಾಗುತ್ತಿದೆ. ಚಿಕನ್ ಶೋರ್ಮಾ ತಿಂದು 16 ವರ್ಷ ಬಾಲಕಿ ಮೃತಪಟ್ಟ ಬಳಿಕವಂತೂ ಕೇರಳದ ಆಹಾರ ಸುರಕ್ಷತಾ ಇಲಾಖೆ ಹೋಟೆಲ್ಗಳ ಮೇಲೆ ದಾಳಿ ಮಾಡಿದ್ದು, ಈಗಾಗಲೇ ಅನೇಕ ಹೋಟೆಲ್ಗಳಿಗೆ ಬೀಗ ಜಡಿದಿದೆ.
ಇದರ ನಡುವೆಯೇ ಮತ್ತೊಂದು ಹೋಟೆಲ್ನ ಕರ್ಮಕಾಂಡ ಬಯಲಾಗಿದೆ.
ಫುಡ್ ಡೆಲಿವರಿ ಪಾರ್ಸೆಲ್ನಲ್ಲಿ ಹಾವಿನ ಚರ್ಮವನ್ನು ನೋಡಿ ಮಹಿಳೆ ಮತ್ತು ಆಕೆಯ ಮಗಳು ಶಾಕ್ ಆಗಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ನಡೆದಿದೆ. ಈ ಪ್ರಕರಣವನ್ನು ಅಧಿಕಾರಿಗಳ ಗಮನಕ್ಕೆ ತಂದ ಕೂಡಲೇ ಹೋಟೆಲ್ ಅನ್ನು ಬಂದ್ ಮಾಡಲಾಗಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ ತಿರುವನಂತಪುರಂ ನಿವಾಸಿ ಪ್ರಿಯಾ ಅವರು ಗುರುವಾರ ನೆಡುಮಂಗಡು ಏರಿಯಾದಲ್ಲಿರುವ ರೆಸ್ಟೊರೆಂಟ್ನಲ್ಲಿ ಎರಡು ಪರೋಟ ಆರ್ಡರ್ ಮಾಡಿದ್ದರು. ಆಹಾರ ಡೆಲಿವರಿ ಆದ ಕೂಡಲೇ ಮೊದಲು ತಮ್ಮ ಮಗಳಿಗೆ ಬಡಿಸಿದರು. ಮಗಳು ಊಟ ಮುಗಿಸಿದ ಬಳಿಕ ಪ್ರಿಯಾ ಅವರು ಊಟ ಮಾಡುವಾಗ ಪಾರ್ಸೆಲ್ ಪೇಪರ್ನಲ್ಲಿ ಅರ್ಧ ಬೆರಳಿನ ಉದ್ದದಷ್ಟು ಹಾವಿನ ಚರ್ಮ ಪತ್ತೆಯಾಗಿದೆ. ಇದನ್ನು ನೋಡಿ ಅಮ್ಮ-ಮಗಳು ಶಾಕ್ ಆಗಿದ್ದಾರೆ.
ಇದಾದ ಕೂಡಲೇ ಪ್ರಿಯಾ ಅವರು ಈ ಘಟನೆಯ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದರು. ತಕ್ಷಣ ದೂರಿಗೆ ಸ್ಪಂದಿಸಿದ ಅಧಿಕಾರಿಗಳು ರೆಸ್ಟೊರೆಂಟ್ ಪರಿಶೀಲಿಸಿದ್ದಾರೆ. ರೆಸ್ಟೊರೆಂಟ್ ಕಳಪೆ ಪರಿಸ್ಥಿತಿಯಲ್ಲಿದ್ದರಿಂದ ತಕ್ಷಣ ಅದನ್ನು ಬಂದ್ ಮಾಡಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಆಹಾರ ಸುರಕ್ಷತಾ ಅಧಿಕಾರಿ ಅರ್ಶಿತಾ ಬಶೀರ್, ಆಹಾರ ಪ್ಯಾಕಿಂಗ್‌ಗೆ ಬಳಸುತ್ತಿದ್ದ ಪತ್ರಿಕೆಯಲ್ಲಿ ಹಾವಿನ ಚರ್ಮ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ರೆಸ್ಟೊರೆಂಟ್ನ ಅಡುಗೆ ಮನೆಯಲ್ಲಿ ಸಾಕಷ್ಟು ಬೆಳಕು ಇಲ್ಲ ಮತ್ತು ಸ್ವಚ್ಛತೆಯನ್ನು ನಿರ್ವಹಿಸಿಲ್ಲ. ಹೀಗಾಗಿ ರೆಸ್ಟೊರೆಂಟ್ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಮತ್ತು ಮಾಲೀಕರಿಗೆ ಶೋಕಾಸ್ ನೋಟಿಸ್ ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ.