ತೀವ್ರ ಚಂಡಮಾರುತ 'ಅಸಾನಿ'ಯ ಹಿನ್ನೆಲೆಯಲ್ಲಿ ಮಂಗಳವಾರ ಚೆನ್ನೈ ಹಾಗೂ ವಿಶಾಖಪಟ್ಟಣಂ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹೈದರಾಬಾದ್, ವಿಶಾಖಪಟ್ಟಣಂ, ಜೈಪುರ ಹಾಗೂ ಮುಂಬೈಯಿಂದ ಹಾರಾಟ ಆರಂಭಿಸಿದ ವಿಮಾನಗಳು ಸೇರಿದಂತೆ ಚೆನ್ನೈಯತ್ತ ತೆರಳುವ 10 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ವಿಮಾನಗಳ ಸಂಚಾರವನ್ನು ರದ್ದುಗೊಳಿಸಿರುವ ಬಗ್ಗೆ ಪ್ರಯಾಣಿಕರಿಗೆ ಸೋಮವಾರ ಮಾಹಿತಿ ನೀಡಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಇಂಡಿಗೊದ 23 ಆಗಮನ ಹಾಗೂ 23 ನಿರ್ಗಮನ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ ಎಂದು ವಿಶಾಖಪಟ್ಟಣಂ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಶ್ರೀನಿವಾಸ ರಾವ್ ಅವರು ಹೇಳಿದ್ದಾರೆ. ಮಂಗಳವಾರ ಸಂಚಾರ ನಿಗದಿಯಾಗಿದ್ದ ಏರ್ ಏಷ್ಯಾ ಹಾಗೂ ಏರ್ ಇಂಡಿಯಾದ ಎರಡು ಆಗಮನ ಹಾಗೂ ಎರಡು ನಿರ್ಗಮನ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ, ನೆಲ್ಲೂರು ಹಾಗೂ ತಿರುಪತಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ತಮಿಳುನಾಡಿನ ಚೆನ್ನೈ, ಚೆಂಗಲಪಟ್ಟು, ಕಾಂಚಿಪುರಂ ಹಾಗೂ ಈರೋಡ್ನಲ್ಲಿ ಕೂಡ ಭಾರೀ ಮಳೆ ಸುರಿದಿದೆ. ಆಂಧ್ರಪ್ರದೇಶದ ಉತ್ತರ ಕರಾವಳಿಯ ವಿವಿಧ ಭಾಗಗಳಲ್ಲಿ ಭಾರೀ ಮಳೆ ಹಾಗೂ ಒಡಿಶಾ ಕರಾವಳಿಯ ಅಲ್ಲಲ್ಲಿ ಮಂಗಳವಾರ ರಾತ್ರಿ ಭಾರೀ ಮಳೆ ಸುರಿಯಲಿದೆ. ಒಡಿಶಾದಲ್ಲಿ ಬುಧವಾರ ಭಾರೀ ಮಳೆ ಹಾಗೂ ಗುರುವಾರ ಲಘವಿನಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪರಿಹಾರ ಉದ್ದೇಶಕ್ಕಾಗಿ ಆಡಳಿತ 179 ಚಂಡಮಾರುತ ಆಶ್ರಯಗಳನ್ನು ರೂಪಿಸಿದೆ ಎಂದು ಒಡಿಶಾದ ಪುರಿ ಜಿಲ್ಲೆಯ ಸಹಾಯಕ ಜಿಲ್ಲಾಧಿಕಾರಿ ಬಾಬಾತರಣ್ ಸಾಹು ತಿಳಿಸಿದ್ದಾರೆ. ತಗ್ಗು ಪ್ರದೇಶಗಳಿಂದ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಆಡಳಿತ ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ. ಚಂಡಮಾರು ಬೆಳಗ್ಗೆ 11.30ಕ್ಕೆ ಆಂಧ್ರಪ್ರದೇಶದ ಆಗ್ನೇಯ ಕಾಕಿನಾಡದಿಂದ 210 ಕಿ.ಮೀ. ದೂರದಲ್ಲಿ ಕೇಂದ್ರವನ್ನು ಹೊಂದಿತ್ತು. ಇದು ಬುಧವಾರದ ಒಳಗೆ ಕಾಕಿನಾಡ ಹಾಗೂ ವಿಶಾಖಪಟ್ಟಣದತ್ತ ಸಾಗುವ ನಿರೀಕ್ಷೆ ಇದೆ. ಅನಂತರ ಇದು ಆಂಧ್ರಪ್ರದೇಶದ ಕರಾವಳಿಯಲ್ಲಿ ಸಾಗಲಿದೆ. ಬಳಿಕ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.