ಅಂಬಾಲ: ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ತ್ಯಾಗ ಮಾಡಲಿದ್ದೇವೆ ಎಂದು ಹರಿಯಾಣದ ಅಂಬಾಲ ನಗರ ಕ್ಷೇತ್ರದ ಬಿಜೆಪಿ ಶಾಸಕ ಅಸೀಮ್ ಗೋಯೆಲ್ ಹಲವರ ಜತೆಗೂಡಿ ಪ್ರತಿಜ್ಞೆ ಮಾಡಿದ್ದಾರೆ.
ಅಂಬಾಲ: ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ತ್ಯಾಗ ಮಾಡಲಿದ್ದೇವೆ ಎಂದು ಹರಿಯಾಣದ ಅಂಬಾಲ ನಗರ ಕ್ಷೇತ್ರದ ಬಿಜೆಪಿ ಶಾಸಕ ಅಸೀಮ್ ಗೋಯೆಲ್ ಹಲವರ ಜತೆಗೂಡಿ ಪ್ರತಿಜ್ಞೆ ಮಾಡಿದ್ದಾರೆ.
ಗೋಯೆಲ್ ಹಾಗೂ ಇತರರು ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರತಿಜ್ಞೆ ಮಾಡಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
(ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವಿಡಿಯೊ)
'ಹಿಂದೂಸ್ತಾನವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇವೆ. ಇದಕ್ಕೆ ನಾವು ಬದ್ಧರಾಗಿರಲಿದ್ದೇವೆ' ಎಂದು ಗೋಯೆಲ್ ಮತ್ತು ಇತರರು ಹೇಳುತ್ತಿರುವುದು ವಿಡಿಯೊದಲ್ಲಿದೆ.
'ಯಾವುದೇ ಬೆಲೆ ತೆತ್ತಾದರೂ ನಾವು ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿದೆ. ಈ ಗುರಿಯನ್ನು ಸಾಧಿಸಲು ನಮ್ಮ ಪೂರ್ವಜರು ಮತ್ತು ದೇವತೆಗಳು ನಮಗೆ ಶಕ್ತಿ ನೀಡಲಿದ್ದಾರೆ ಎಂಬುದಾಗಿ ಭಾವಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಶಾಸಕರ ಜತೆಗಿದ್ದವರು ಹಿಂದೂ ರಾಷ್ಟ್ರ ಪರ ಘೋಷಣೆಯನ್ನೂ ಕೂಗಿದ್ದಾರೆ. ಶಾಸಕರು ಇದಕ್ಕೆ ಎರಡೂ ಕೈಯೆತ್ತಿ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಸೀಮ್ ಗೋಯೆಲ್, ನಾನೊಬ್ಬ ಹಿಂದೂವಾಗಿ ಪ್ರತಿಜ್ಞೆ ಮಾಡಿದ್ದೇನೆಯೇ ಹೊರತು ಬಿಜೆಪಿ ಶಾಸಕನಾಗಿ ಅಲ್ಲ ಎಂದು ಹೇಳಿದ್ದಾರೆ.
'ನಾನೊಬ್ಬ ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ' ಎಂದು ಅವರು ಹೇಳಿದ್ದಾರೆ. ಹಿಂದೂ ರಾಷ್ಟ್ರ ಪ್ರತಿಜ್ಞೆ ಸ್ವೀಕರಿಸಿದ ಬಳಿಕ, ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿಯೂ ಅವರು ಭಾಗವಹಿಸಿದ್ದಾರೆ.