ಕಾಸರಗೋಡು: ಕೇರಳದಲ್ಲಿ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಆಕ್ರಮಣ ನಡೆಸುತ್ತಿರುವ ಮೂಲಭೂತವಾದಿ ಸಂಘಟನೆಗಳೊಂದಿಗೆ ಸಿಪಿಎಂ ಕೈಜೋಡಿಸಿ ಕಾರ್ಯಾಚರಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಪಿ.ಸುಧೀರ್ ತಿಳಿಸಿದ್ದಾರೆ.
ಅವರು ಕಾಞಂಗಾಡು ನೆಲ್ಲಿತ್ತರದಲ್ಲಿ ನಡೆದ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕರಳ ಸರ್ಕಾರ ತುರ್ತಾಗಿ ಜಾರಿಗೆ ತರಕುದ್ದೇಶಿಸಿರುವ ಸಿಲ್ವರ್ ಲೈನ್ ರೈಲ್ವೆ ಯೋಜನೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದರ ಜತೆಗೆ ರಾಜ್ಯದ ಸಾಲವನ್ನು ಹೆಚ್ಚಿಸುವ ಯೋಜನೆಯಾಗಿದೆ. ಕೇರಳ ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸುವ ಕೆ-ರೈಲ್ ಸಿಲ್ವರ್ ಲೈನ್ ಯೋಜನೆಯನ್ನು ವಿವಿಧ ಕ್ಷೇತ್ರಗಳ ತಜ್ಞರ ವಿರೋಧವನ್ನು ಲೆಕ್ಕಿಸದೆ ಎಡರಂಗ ಸರ್ಕಾರ ಜಾರಿಗೆ ತರಲುದ್ದೇಶಿಸುವ ಮೂಲಕ ಕೇರಳದ ಜನತೆಗೆ ವಂಚನೆಯೆಸಗುತ್ತಿದೆ ಎಂದು ತಿಳಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ವಿ. ರಾಜನ್, ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಗಣೇಶನ್, ರಾಜ್ಯ ಕೋಶದ ಸಂಯೋಜಕ ಅಶೋಕನ್ ಕುಳನಾಡ್, ರಾಷ್ಟ್ರೀಯ ಸಮಿತಿ ಸದಸ್ಯರಾದ ಎಂ. ಸಂಜೀವ ಶೆಟ್ಟಿ, ಪ್ರಮೀಳಾ ಸಿ. ಮತ್ತು ನಾಯ್ಕ್ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್ ಸ್ವಾಗತಿಸಿದರು. ವಿಜಯಕುಮಾರ್ ರೈ ವಂದಿಸಿದರು.