ಗುಜರಾತ್: ದೇವಾಲಯವೊಂದರಲ್ಲಿ ಭಕ್ತಿಗೀತೆಗಾಗಿ ಸ್ಪೀಕರ್ ಬಳಕೆ ವಿಚಾರವಾಗಿ ಜಗಳ ಉಂಟಾಗಿ ಆರು ಮಂದಿ ದುಷ್ಕರ್ಮಿಗಳು 42 ವರ್ಷದ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಗುಜರಾತ್ ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ ಎಂದು ಲಂಗ್ನಾಜ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಸ್ ಬಿ ಚಾವ್ಡಾ ತಿಳಿಸಿದ್ದಾರೆ.
ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದ್ದ ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ. ಸಣ್ಣ ದೇವಾಲಯವೊಂದರಲ್ಲಿ ಸ್ಪೀಕರ್ ಬಳಕೆ ವಿಚಾರವಾಗಿ ಜಗಳ ನಡೆದಿದ್ದು, ಜಸ್ವಂತ್ ಠಾಕೂರ್ ಅವರ ಮೇಲೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ಅವರ ಸಹೋದರ ಅಜಿತ್ ಮೇಲೂ ದಾಳಿ ನಡೆಸಲಾಗಿದೆ ಎಂದು ಅವರು ಚಾವ್ಡಾ ಹೇಳಿದ್ದಾರೆ.
ಮೇ 3 ರಂದು ಈ ಘಟನೆ ನಡೆದಿದೆ. ದೇವಾಲಯದಲ್ಲಿ ದೀಪ ಹೊತ್ತಿಸಿದ ಅಜಿತ್, ಭಕ್ತಿಯ ಗೀತೆ ಹಾಕಿದ್ದಾರೆ. ಸ್ಪೀಕರ್ ಬಳಕೆಯಿಂದ ಬೇಸತ್ತ ಮತ್ತೊಂದು ಗ್ರಾಮದ ಸಾದಾಜಿ ಠಾಕೂರ್ ಆಕ್ಷೇಪಿಸಿದ್ದಾರೆ. ಸ್ಪೀಕರ್ ಶಬ್ದವನ್ನು ಈಗಾಗಲೇ ಕಡಿಮೆ ಮಾಡಲಾಗಿದೆ ಎಂದು ಅಜಿತ್ ಹೇಳಿದಾಗ ಸಾದಾಜಿ ಸೇರಿದಂತೆ ಐವರು ಸೇರಿ ಠಾಕೂರ್ ಸಹೋದರರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದಾಗಿ ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಗೊಂಡ ಸಹೋದರರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಜಸ್ವಂತ್ ಸಾವನ್ನಪ್ಪಿದ್ದು, ಅಜಿತ್ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.