ಬರ್ಲಿನ್: ಭಾರತ ಶಾಂತಿಯ ಪರವಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದು, ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ವಿಜೇತರು ಯಾರೂ ಇರುವುದಿಲ್ಲ ಎಂಬುದನ್ನು ನಂಬುತ್ತದೆ ಎಂದು ಬರ್ಲಿನ್ ನಲ್ಲಿ ಹೇಳಿದ್ದಾರೆ.
ಜರ್ಮನ್ ಚಾನ್ಸಿಲರ್ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಪ್ರಧಾನಿ ಮೋದಿ, ಉಕ್ರೇನ್ ಬಿಕ್ಕಟ್ಟಿನ ಪ್ರಾರಂಭದಿಂದಲೂ ಭಾರತ ಯುದ್ಧ ಕೊನೆಗಾಣಿಸುವಿಕೆಗೆ ಕರೆ ನೀಡಿದೆ, ವಿವಾದವನ್ನು ಬಗೆಹರಿಸಿಕೊಳ್ಳುವುದಕ್ಕೆ ಮಾತುಕತೆಯೊಂದೇ ಪರಿಹಾರ ಎಂದು ಸಲಹೆ ನೀಡುತ್ತಿತ್ತು.
ಈ ಯುದ್ಧದಲ್ಲಿ ಯಾರೂ ವಿಜೇತರಿರುವುದಿಲ್ಲ, ;ಎಲ್ಲರೂ ನಷ್ಟ ಎದುರಿಸುತ್ತಿದ್ದಾರೆ ಎಂದು ಭಾರತ ನಂಬಿದೆ ಆದ್ದರಿಂದ ನಾವು ಶಾಂತಿಯ ಪರವಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನಿಂದ ಉಂಟಾದ ವ್ಯತ್ಯಯಗಳಿಂದಾಗಿ ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಆಹಾರ ಧಾನ್ಯಗಳ ಕೊರತೆ ಹಾಗೂ ರಸಗೊಬ್ಬರಗಳ ಕೊರತೆ ಉಂಟಾಗಿದ್ದು ಪರಿಣಾಮವಾಗಿ ಜಗತ್ತಿನಾದ್ಯಂತ ಎಲ್ಲಾ ಕುಟುಂಬಗಳಿಗೂ ಈ ಬಿಸಿ ತಟ್ಟಿದೆ ಎಂದು ಮೋದಿ ಹೇಳಿದ್ದಾರೆ.