ಲಖನೌ: ತಾಜ್ ಮಹಲ್ ನಲ್ಲಿ ಮುಚ್ಚಲ್ಪಟ್ಟಿರುವ 22 ಕೊಠಡಿಗಳಿಗೆ ಸಂಬಂಧಿಸಿದಂತೆ ಸತ್ಯಶೋಧನೆ ಸಮಿತಿ ರಚನೆಗೆ ಕೋರಿ ಮನವಿ ಮಾಡಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ನ್ಯಾಯಾಲಯ, "ಈ ವಿಷಯವಾಗಿ ಸತ್ಯಶೋಧನೆ ಸಮಿತಿ ರಚನೆಗೆ ಕೇಳುವುದು ನಿಮ್ಮ ಹಕ್ಕುಗಳ ಅಡಿಯಲ್ಲಿ ಬರುವುದಿಲ್ಲ. ಅದು ಆರ್ ಟಿಐ ನ ವ್ಯಾಪ್ತಿಗೂ ಬರುವುದಿಲ್ಲ. ಈ ಅರ್ಜಿಯಿಂದ ನಮಗೆ ಮನವರಿಕೆಯಾಗಿಲ್ಲ ಎಂದು ಹೇಳಿದೆ. "ನಾಳಿನ ದಿನಗಳಲ್ಲಿ ನೀವು ನಮ್ಮ ಚೇಂಬರ್ ಗಳನ್ನು ನೋಡುವುದಕ್ಕೂ ಅನುಮತಿ ಕೇಳುತ್ತೀರಿ, ದಯಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವ್ಯವಸ್ಥೆಯನ್ನು ಅಣಕಿಸಬೇಡಿ" ಎಂದು ವಿಚಾರಣೆ ವೇಳೆ ಹೈಕೋರ್ಟ್ ಅರ್ಜಿದಾರರಿಗೆ ತೀಕ್ಷ್ಣವಾಗಿ ಹೇಳಿದೆ.
ಧಾರ್ಮಿಕ ಸ್ವಾತಂತ್ರ್ಯದ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶವನ್ನು ಅರ್ಜಿದಾರರು ಕೋರ್ಟ್ ಗೆ ನೀಡಿದ್ದು, ಅರ್ಜಿದಾರರ ಈ ವಾದವನ್ನು ಒಪ್ಪುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ಈಗ ಅರ್ಜಿದಾರರು ಈಗ ತಿದ್ದುಪಡಿ ಮಾಡಿದ ಅರ್ಜಿ ಸಲ್ಲಿಸುವುದಕ್ಕೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಬಿಜೆಪಿ ಅಯೋಧ್ಯೆಯ ವಿಭಾಗದ ಮಾಧ್ಯಮ ಉಸ್ತುವಾರಿ ರಂಜೀತ್ ಸಿಂಗ್ ಅವರು ತಾಜ್ ಮಹಲ್ ನ 22 ಕೊಠಡಿಗಳ ಹಿಂದಿರುವ ಸತ್ಯವನ್ನು ಅರಿಯುವುದಕ್ಕೆ ಸತ್ಯಶೋಧನಾ ಸಮಿತಿ ರಚಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ವಾರ ಸಲ್ಲಿಸಿದ್ದರು.
ಇತಿಹಾಸಕಾರರು ಹಾಗೂ ಹಿಂದೂ ಸಂಘಟನೆಗಳ ಪ್ರಕಾರ ತಾಜ್ ಮಹಲ್ ಪುರಾತನ ಹಿಂದೂ ದೇವಾಲಯವಾಗಿದ್ದು, ಪುರಾತತ್ವ ಇಲಾಖೆ ವಿಶೇಷ ಸಮಿತಿ ನೇಮಿಸುವ ಮೂಲಕ ಮುಚ್ಚಲ್ಪಟ್ಟಿರುವ ತಾಜ್ ಮಹಲ್ ನ ಕೊಠಡಿಗಳನ್ನು ಪರಿಶೀಲಿಸಿ ಸಾರ್ವಜನಿಕವಾಗಿ ವರದಿಯನ್ನು ಪ್ರಕಟಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ತಾಜ್ ಮಹಲ್ ನ್ನು ದೇವಾಲಯವನ್ನಾಗಿ ಮಾಡುವ ಉದ್ದೇಶವಿಲ್ಲ. ಆದರೆ ಸಾಮಾಜಿಕ ಸೌಹಾರ್ದತೆಗೆ ಸತ್ಯವನ್ನು ಬಹಿರಂಗಪಡಿಸಬೇಕೆಂಬುದು ಅರ್ಜಿಯ ಉದ್ದೇಶವಾಗಿದೆ ಎಂದು ಸಿಂಗ್ ವಾದಿಸಿದ್ದರು.
ನ್ಯಾ. ಡಿ.ಕೆ ಉಪಾಧ್ಯಾಯ ಹಾಗೂ ಸುಭಾಷ್ ವಿದ್ಯಾರ್ಥಿ ಅರ್ಜಿದಾರರನ್ನು ಅರ್ಜಿ ಯಾವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಪ್ರಶ್ನಿಸಿದ್ದು, ಅರ್ಜಿದಾರರು ಸರ್ಕಾರಕ್ಕೆ, ಅಧಿಕಾರಿಗಳಿಗೆ ಸೂಚನೆ ನೀಡಲು ಕೋರುತ್ತಿದ್ದಾರೆ, ಆದರೆ ಹಕ್ಕಿನ ಉಲ್ಲಂಘನೆಯಾದಾಗ ಮಾತ್ರ ಸರ್ಕಾರಕ್ಕೆ, ಅಧಿಕಾರಿಗಳಿಗೆ ಸೂಚನೆ ನೀಡಲು ಸಾಧ್ಯ. ನೀವು ನಮ್ಮಿಂದ ಯಾವ ಆದೇಶವನ್ನು ನಿರೀಕ್ಷಿಸುತ್ತಿದ್ದೀರಿ? ತಾಜ್ ಮಹಲ್ ನ್ನು ನಿರ್ಮಿಸಿದ್ದು ಯಾರು? ಐತಿಹಾಸಿಕ ಸಂಗತಿಗಳಿಗೆ ಹೋಗಬೇಡಿ,
ಮ್ಯಾಂಡಮಸ್ ನ್ನು ಹಕ್ಕುಗಳ ಉಲ್ಲಂಘನೆಯಾದಾಗ ಮಾತ್ರ ನೀಡುವುದಕ್ಕೆ ಸಾಧ್ಯವಿದೆ. ಆದರೆ ಈಗ ನಿಮ್ಮ ಯಾವ ಹಕ್ಕು ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಕೇಳಿದೆ.
ಇದಕ್ಕೆ ಅರ್ಜಿದಾರರು ವಿಷಯದ ಆಳವನ್ನು ಅರಿಯಲು ಸತ್ಯಶೋಧನ ಸಮಿತಿ ರಚನೆ ಮಾಡಬೇಕೆಂದು ಪ್ರತಿಕ್ರಿಯೆ ನೀಡಿ, ಮುಚ್ಚಲ್ಪಟ್ಟಿರುವ 22 ಕೊಠಡಿಗಳಿಗೆ ಪ್ರವೇಶ ಕಲ್ಪಿಸುವಂತೆ ಆ ಮೂಲಕ ತಾಜ್ ಮಹಲ್ ಗೆ ಸಂಬಂಧಿಸಿದ ಸತ್ಯ ಬಹಿರಂಗಕ್ಕೆ ಮನವಿ ಮಾಡಿದರು, ಭದ್ರತೆಯ ಕಾರಣಗಳಿಂದಾಗಿ ಹಲವು ಕೊಠಡಿಗಳನ್ನು ಏಕೆ ಮುಚ್ಚಲಾಗಿದೆ ಎಂಬುದನ್ನು ಪ್ರಜೆಗಳು ತಿಳಿಯಬೇಕು ಎಂದು ಅರ್ಜಿದಾರರು ವಾದಿಸಿದರು.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನ್ಯಾಯಪೀಠ, ನೀವು ಯಾರಿಂದ ಮಾಹಿತಿಯನ್ನು ಕೇಳುತ್ತಿದ್ದೀರಿ? ಭದ್ರತಾ ಕಾರಣಗಳಿಂದಾಗಿ ಕೊಠಡಿಗಳನ್ನು ಮುಚ್ಚಲಾಗಿದೆ ಎಂಬುದನ್ನು ನೀವು ಒಪ್ಪಲು ತಯಾರಿಲ್ಲದೇ ಇದ್ದರೆ ಅದನ್ನು ಪ್ರಶ್ನಿಸಲು ಕಾನೂನಿನ ಅಡಿಯಲ್ಲಿ ಪರಿಹಾರವನ್ನು ಹುಡುಕಿ, ಮೊದಲು ಒಂದಷ್ಟು ಸಂಶೋಧನೆ ಮಾಡಿ, ಎಂಎ ಪಿಹೆಚ್ ಡಿಗೆ ಪ್ರವೇಶ ಪಡೆಯಿರಿ, ಆದರೆ ಪಿಐಎಲ್ ವ್ಯವಸ್ಥೆಯನ್ನು ಅಣಕಿಸಬೇಡಿ ಎಂದು ಎಚ್ಚರಿಸಿದೆ.