ಉಜ್ಜಯಿನಿ: ಮಧ್ಯಪ್ರದೇಶದ ಅಸ್ಲಾನಾ ಗ್ರಾಮದಲ್ಲಿ ಗುರುವಾರ ಮದುವೆ ಸಮಾರಂಭದಲ್ಲಿ ಸರಿಯಾಗಿ ಮುಹೂರ್ತದ ವೇಳೆ ವಿದ್ಯುತ್ ಕೈಕೊಟ್ಟಿದ್ದು, ಈ ಸಂದರ್ಭದಲ್ಲಿ ವರಗಳು ಅದಲು-ಬದಲಾಗಿದ್ದಾರೆ. ಸ್ವಲ್ಪದರಲ್ಲೇ ಇಬ್ಬರು ವಧುಗಳು ಮತ್ತೊಬ್ಬರನ್ನು ಮದುವೆಯಾಗುವ ಅಪಾಯದಿಂದ ಪಾರಾಗಿರುವ ವಿಲಕ್ಷಣ ಘಟನೆ ನಡೆದಿದೆ.
ರಮೇಶ್ ಭೀವೆರೆ ಅವರ ಮೂವರು ಪುತ್ರಿಯರಾದ ನಿಕಿತಾ, ಕರಿಷ್ಮಾ ಮತ್ತು ಕೋಮಲ್ ಅವರು ಒಂದೇ ದಿನ ಒಂದೇ ಮುಹೂರ್ತದಲ್ಲಿ ವಿವಾಹವಾಗಿದ್ದಾರೆ.
ನಿಕಿತಾ ಮತ್ತು ಕರಿಷ್ಮಾಗೆ ಬೇರೆ, ಬೇರೆ ಊರಿನ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಗುರುವಾರ ಮುಹೂರ್ತದ ವೇಳೆ ಕರೆಂಟ್ ಕಟ್ ಆಗಿದ್ದು, ಭೋಲಾ ಮತ್ತು ಗಣೇಶ್ ತಪ್ಪಾಗಿ ಬೇರೆ ಬೇರೆ ವಧುಗಳೊಂದಿಗೆ ಕುಳಿತಿದ್ದಾರೆ. ಮದುಮಗಳಿಬ್ಬರೂ ಒಂದೇ ತರಹದ ಉಡುಗೆ ತೊಟ್ಟಿದ್ದರಿಂದ ಕತ್ತಲಲ್ಲಿ ತೀವ್ರ ಗೊಂದಲ ಏರ್ಪಟ್ಟಿದೆ.
ಆದಾಗ್ಯೂ, ಸಪ್ತಪದಿ(ಸಾತ್ ಫೇರ್) ತುಳಿಯುವ ಮೊದಲು ಕರೆಂಟ್ ಬಂದಿದ್ದು, ತಪ್ಪನ್ನು ಸರಿಪಡಿಸಿಕೊಳ್ಳಲಾಗಿದೆ.